ಉಳ್ಳಾಲ(ದಕ್ಷಿಣಕನ್ನಡ): ಜ್ವರ ಬಂದ ತಕ್ಷಣ ಪರೀಕ್ಷೆಗೆ ಒಳಗಾಗುವುದು ಒಳಿತು. ಕೊನೆ ಕ್ಷಣದಲ್ಲಿ ಆಸ್ಪತ್ರೆ ಸೇರುವ ಪ್ರಯತ್ನಕ್ಕೆ ಕೈಹಾಕದಿರಿ. ಜನಜಾಗೃತಿ ಮೂಲಕ ಕೊರೊನಾ ವೈರಸ್ನ್ನು ನಿರ್ಮೂಲನೆಗೊಳಿಸುವ ಪ್ರಯತ್ನ ಆಗಬೇಕಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರು ಲಾಲ್ಬಾಗ್ನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆಯಿಂದ ಪ್ರಮಾಣ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಖಾದರ್, ರಾಜ್ಯದ ಮುಖ್ಯ ಆಯುಕ್ತರ ಆದೇಶವನ್ನು ಪಾಲಿಸಿದ ದ.ಕ. ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ಕೊರೊನಾ ಸಂದರ್ಭ ಕಾರ್ಯನಿರ್ವಹಿಸಲು ಯಾರೂ ಮುಂದಾಗದ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ ಕುರಿತು ಜನರು ಗೊಂದಲಮಯ ಪ್ರಶ್ನೆ ಕೇಳುವ ಬದಲು ಪರೀಕ್ಷೆಗೆ ಒಳಪಡುವುದು ಉತ್ತಮ. ಸದ್ಯ, ಅರ್ಧ ಗಂಟೆಯಲ್ಲಿ ಕೋವಿಡ್ ವರದಿ ಬರುತ್ತದೆ. ವೆಂಟಿಲೇಟರ್ ಸಂಜೀವಿನಿಯಲ್ಲ, ಶೇ. 90ರಷ್ಟು ಮಂದಿ ವೆಂಟಿಲೇಟರ್ಗೆ ಹೋದವರು ಸಾವನ್ನಪ್ಪಿದ್ದಾರೆ. ಹೀಗಾಗಿ ಜ್ವರ ಬಂದ ತಕ್ಷಣ ಪರೀಕ್ಷೆಗೆ ಒಳಗಾಗುವುದು ಒಳಿತು. ಕೊನೆ ಕ್ಷಣದಲ್ಲಿ ಆಸ್ಪತ್ರೆ ಸೇರುವ ಪ್ರಯತ್ನಕ್ಕೆ ಕೈಹಾಕದಿರಿ. ಜನಜಾಗೃತಿ ಮೂಲಕ ರೋಗವನ್ನು ಹತ್ತಿಕ್ಕುವ ಪ್ರಯತ್ನ ಆಗಬೇಕಿದೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಎನ್.ಜಿ. ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಪ್ಲಾಸ್ಮಾ ಕಲೆಕ್ಷನ್ ಸೆಂಟರ್ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಅಥವಾ ವೆನ್ಲಾಕ್ ಬ್ಲಡ್ ಬ್ಯಾಂಕ್ನಲ್ಲಿ ಕೊರೊನಾ ಮುಕ್ತರಾದವರಿಂದ ಪ್ಲಾಸ್ಮಾ ಸಂಗ್ರಹಿಸಿ, ಕೊರೊನಾ ಸೋಂಕಿತರಿಗೆ ನೀಡುವ ಪ್ರಯತ್ನಗಳು ಮುಂದುವರಿಯುತ್ತಿವೆ. ಪ್ಲಾಸ್ಮಾ ಥೆರಪಿ ಅನುಷ್ಠಾನದ ಸಂದರ್ಭ ಸ್ವಯಂಸೇವಕರ ಸಹಕಾರ ಅಗತ್ಯ. ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಅವರೆಲ್ಲರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರಲ್ಲಿ ಪ್ಲಾಸ್ಮಾ ದಾನ ಮಾಡಲು ಒಪ್ಪಿಸುವ ಕಾರ್ಯವನ್ನು ಕೊರೊನಾ ವಾರಿಯರ್ಸ್ ಮಾಡಬೇಕಿದೆ.
ಸರ್ಕಾರದಿಂದ ಅನುಮತಿ ಬಂದ ತಕ್ಷಣ ಪ್ರತಿಯೊಬ್ಬ ಕೋವಿಡ್ ವಾರಿಯರ್ಗೆ 50 ಮಂದಿಯ ಪಟ್ಟಿಯನ್ನು ನೀಡಲಾಗುವುದು. ಹಲವು ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಕೊರೊನಾ ಪೀಡಿತರು ವ್ಯಾಪಕವಾಗಿದ್ದ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಯಿಂದ ಸದ್ಯ, ಸೋಂಕಿತರ ಸಂಖ್ಯೆ ಶೇ.4ಕ್ಕೆ ಬಂದಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಯೋಜನೆ ಸಿದ್ಧವಾಗುತ್ತಿದೆ ಎಂದರು.