ಬೆಂಗಳೂರು: ಕೊರೊನಾ ಸೋಕಿನಿಂದ ಜನರನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದಾದ ಮೇಲೆ ಅಧಿಕಾರದಲ್ಲಿ ಏಕಿದ್ದೀರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳದೆ, ಈಗ ದೇವರೇ ದಿಕ್ಕು ಎಂದು ಹೇಳುವ ಮೂಲಕ ಶ್ರೀರಾಮುಲು ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಸರ್ಕಾರವನ್ನು ತಿವಿದರು. ಸೋಂಕು ನಿಯಂತ್ರಣಕ್ಕೆ ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ಮಾಡಿದ ಬಳಿಕವೂ ವಿಫಲವಾದಾಗ ದೇವರ ಮೊರೆ ಹೋಗುವುದು ಸರಿ. ಆದರೆ, ಸರ್ಕಾರದಲ್ಲಿ ಹಣ, ಕೈಯ್ಯಲ್ಲಿ ಅಧಿಕಾರ ಎಲ್ಲವೂ ಇದ್ದು ಯಾವುದೇ ಪ್ರಯತ್ನ ಮಾಡದೇ ಈ ರೀತಿ ಹೇಳಿಕೆ ಕೊಡುವ ಶ್ರೀರಾಮುಲು ಅವರು ರಾಜಿನಾಮೆ ಕೊಟ್ಟು ಹೋಗುವುದೇ ಸರಿ. ಸೋಂಕು ನಿಯಂತ್ರಣಕ್ಕೆ ಶ್ರಮಿಸುವುದು ಸಚಿವರೂ ಸೇರಿದಂತೆ ಸರ್ಕಾರದ ಪ್ರಾಥಮಿಕ ಕರ್ತವ್ಯ. ಮೊದಲು ನಮ್ಮ ಪ್ರಯತ್ನ ಮಾಡಿ ಪರಿಹಾರ ಕಂಡು ಹಿಡಿಯಬೇಕು ಎಂದರು.
ಆಶಾ ಕಾರ್ಯಕರ್ತೆಯರ ಭೇಟಿ: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆರು, ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆಗೆ ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಸಿದ್ದರಾಮಯ್ಯ ತಿಳಿಸಿದರು.