ಬೆಂಗಳೂರು: ಭಾನುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಸರಣಿ ಸಭೆಗಳು ನಡೆದಿದ್ದು, ಪಕ್ಷದ ಪದಾಧಿಕಾರಿಗಳ ಜೊತೆ ಕೆಲ ಸಚಿವರೂ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಜೊತೆ ಚರ್ಚಿಸಿದರು. ಸಭೆ ಬಳಿಕ ಸಚಿವರಾದ ಬಿ. ಸಿ. ನಾಗೇಶ್, ಡಾ. ಕೆ.ಸುಧಾಕರ್, ಬಿ.ಶ್ರೀರಾಮುಲು ಅವರು ಸಂತೋಷ್ ಅವರೊಂದಿಗೆ ಸಂಘಟನೆ, ಪಕ್ಷ ಮತ್ತು ಸರ್ಕಾರದ ನಡುವೆ ಇರಬೇಕಾದ ಸಮನ್ವಯತೆ ಕುರಿತು ಮಾತುಕತೆ ನಡೆಸಿದರು ಎನ್ನಲಾಗ್ತಿದೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದ ರಮೇಶ್ ಜಾರಕಿಹೊಳಿ ಅವರು ಬಿ.ಎಲ್ ಸಂತೋಷ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿ ಸಂಪುಟ ಮರು ಸೇರ್ಪಡೆ ಕಸರತ್ತು ನಡೆಸಿದ್ದ ಜಾರಕಿಹೊಳಿ ಸಂತೋಷ್ ಜೊತೆ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ನಂತರ ಪಕ್ಷದ ಕಚೇರಿಯಲ್ಲಿಯೇ ಸಚಿವ ಬಿ.ಶ್ರೀರಾಮುಲು ಜೊತೆ ಜಾರಕಿಹೊಳಿ ಪ್ರತ್ಯೇಕ ಮಾತುಕತೆ ನಡೆಸಿದರು.
ಬಿಜೆಪಿಗೆ ವರ್ತೂರು ಪ್ರಕಾಶ್?: ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆಗೆ ಕಸರತ್ತು ನಡೆಸಿದ್ದಾರೆ. ಪಕ್ಷ ಸೇರ್ಪಡೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಚರ್ಚಿಸಿ ಸೇರ್ಪಡೆ ಕುರಿತು ಮಾಹಿತಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಓದಿ: 'ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಘೋಷವಾಕ್ಯಗಳಡಿ ಬಿಜೆಪಿ ಅಧಿಕಾರ ನಡೆಸುತ್ತಿದೆ'