ಬೆಂಗಳೂರು: ನಿನ್ನೆ ದೆಹಲಿಗೆ ಹೋಗಿದ್ದು ನನ್ನ ವೈಯಕ್ತಿಕ ಕೆಲಸದ ಮೇಲೆ. ರಾಷ್ಟ್ರ ನಾಯಕರನ್ನು ಭೇಟಿಯಾಗಲು ಸಮಯ ಪಡೆದಿರಲಿಲ್ಲ. ಹೀಗಾಗಿ ಯಾರನ್ನೂ ಭೇಟಿಯಾಗಿಲ್ಲ. ನನ್ನ ವೈಯಕ್ತಿಕ ಕೆಲಸ ಮುಗಿಸಿ ದೆಹಲಿಯಿಂದ ವಾಪಾಸ್ ಬಂದಿದ್ದೇನೆ. ಸಿಎಂ ಆಯ್ಕೆಯನ್ನು ರಾಜ್ಯ, ರಾಷ್ಟ್ರ ವರಿಷ್ಠರು ಹಾಗೂ ಸಂಘ ಪರಿವಾರವೇ ತೀರ್ಮಾನಿಸಬೇಕಿದೆ ಎಂದು ಸಿಎಂ ರೇಸ್ ಮುಂಚೂಣಿಯಲ್ಲಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ತಮ್ಮ ನಿವಾಸದ ಬಳಿ, ಸಿಎಂ ರೇಸ್ನಲ್ಲಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ನಾನಷ್ಟೇ ಅಲ್ಲ ರಾಜ್ಯದ 120 ಶಾಸಕರು ಸಿದ್ಧ ಇದ್ದಾರೆ. ಜವಾಬ್ದಾರಿ ವಹಿಸಿ ರಾಜ್ಯದ ಅಭಿವೃದ್ಧಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಲಿಂಗಾಯತ ನಾಯಕರಿಗೇ ಅಧಿಕಾರ ಕೊಡಬೇಕು ಎನ್ನುವ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ಅಧಿಕಾರ ಯಾರಿಗೆ ಕೊಡಬೇಕೆಂಬ ನಿರ್ಧಾರ ಕೈಗೊಳ್ಳಲು ನಮ್ಮ ನಾಯಕರು ಸಮರ್ಥರಿದ್ದಾರೆ. ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.
ರಾಜೀನಾಮೆ ನೀಡಿರುವ ಸಿಎಂ ಬಿಎಸ್ವೈ ಅವರ ಕುರಿತು ನಿರಾಣಿ ಮಾತನಾಡಿ, ರಾಜ್ಯದಲ್ಲಿ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರಿಂದಾಗಿ, ಬೇರೆ ನಾಯಕರು ಹಾಗೂ ಸಂಘ ಪರಿವಾರದ ಪ್ರಯತ್ನದಿಂದ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ಆದರೆ ಪಕ್ಷದ ನಿಯಮದಂತೆ 75 ವರ್ಷದ ನಂತರ ಅಧಿಕಾರ ಮುಂದುವರಿಸುವಂತಿಲ್ಲ. ಹೀಗಿದ್ದರೂ 2 ವರ್ಷ ನಮ್ಮ ಮುಖ್ಯಮಂತ್ರಿಗಳಿಗೆ ಹೆಚ್ಚು ಸಮಯ ಕೊಟ್ಟಿದ್ದಾರೆ. ಇದನ್ನು ನಿನ್ನೆಯ ಭಾಷಣದಲ್ಲೂ ಸಿಎಂ ಹೇಳಿದ್ದಾರೆ. ಆದರೆ ಸಿಎಂ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈಗ ದೆಹಲಿಯಿಂದ ಈಗಾಗಲೇ ಹಿರಿಯ ನಾಯಕರ ತಂಡ ಬಂದಿದ್ದು, ಹೊಸ ಸಿಎಂ ಆಯ್ಕೆ ಮಾಡಲಿದ್ದಾರೆ. ಇದಕ್ಕಾಗಿ ಸಂಜೆ ಶಾಸಕಾಂಗ ಸಭೆ ಕೂಡಾ ಕರೆಯಲಾಗಿದೆ ಎಂದು ನಿರಾಣಿ ತಿಳಿಸಿದ್ದಾರೆ.