ಬೆಂಗಳೂರು: ಈ ಸರ್ಕಾರ ಕೇವಲ ಹೃದಯ ಹೀನವಲ್ಲ, ಪ್ರಜ್ಞಾಹೀನ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಕಿಡಿ ಕಾರಿದರು.
ಓದಿ: ನಟೋರಿಯಸ್ ರೌಡಿಶೀಟರ್ ಚಂದ್ರಶೇಖರ್ ಅಲಿಯಾಸ್ ಗನ್ ಮಂಜ ಬಂಧನ
ಕೆಪಿಸಿಸಿ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ, ರಿಜ್ವಾನ್ ಹರ್ಷದ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಡಿಮೆ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಅಥವಾ ಹೆಚ್ಚು ದುರ್ಬಲವಾದ ಹಣಕಾಸಿನ ಸ್ಥಿತಿಯನ್ನು ಹೊಂದಿರುವ ನಮ್ಮ ಕೆಲವು ನೆರೆಯ ರಾಜ್ಯಗಳು ಸಂಪನ್ಮೂಲಗಳನ್ನು ಹುಡುಕಿ ಹೆಚ್ಚು ಪರಿಹಾರ ಹಣ ಅಗತ್ಯವಿರುವ ಜನರಿಗೆ ನೀಡುತ್ತಿದೆ. ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿರುವ ಕರ್ನಾಟಕವು ಈ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಏಕೆ ಕಡಿಮೆ ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ತಮಿಳುನಾಡು ಸರ್ಕಾರ ಸುಮಾರು 2.07 ಕೋಟಿ ರೂ. ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 14,000 ರೂ. ನೀಡುತ್ತಿದೆ. ಇದರ ಒಟ್ಟು ಮೊತ್ತ 8,368 ಕೋಟಿ ರೂ. ಆದರೆ ನಮ್ಮ ರಾಜ್ಯ ಸರ್ಕಾರ ಬಡವರ ನೆರವಿಗೆ ಇಂತಹ ದೊಡ್ಡ ಮೊತ್ತದ ಸಹಾಯ ನೀಡಲು ಮುಂದಾಗಿಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬಡವರ ಕೈಗೆ ನೀಡುವುದು ಒಳಿತು. ಬಡವ ಒಂದು ರೂಪಾಯಿ ವ್ಯಯ ಮಾಡಿದರೆ ಅದು ಐದು ಬಾರಿ ರೋಟೇಟ್ ಆಗುತ್ತದೆ. ಯಾವುದೇ ಆರ್ಥಿಕ ತಜ್ಞರು ಇದೇ ಮಾತನ್ನು ಹೇಳುತ್ತಾರೆ. ಆದರೆ, ಸರ್ಕಾರ ಈ ಮಾತನ್ನ ಒಪ್ಪುತ್ತಿಲ್ಲ ಎಂದು ವಿವರಿಸಿದರು.
ಈ ಸರ್ಕಾರ ಜನರ ಅಕೌಂಟ್ ಗೆ 10 ಸಾವಿರ ರೂಪಾಯಿ ಹಾಕಬೇಕು. ಕೇರಳ 20,000 ಕೋಟಿ ರೂ. ಪರಿಹಾರ ಪ್ಯಾಕೇಜ್ ಜಾರಿಗೊಳಿಸುತ್ತಿದೆ. ಕರ್ನಾಟಕವು, ಕೇರಳದ ಆರ್ಥಿಕ ಸಾಮರ್ಥ್ಯದ ಎರಡು ಪಟ್ಟು ಹೊಂದಿದೆ. ಆದರೆ, ನಮ್ಮ ಎರಡೂ ಪರಿಹಾರ ಪ್ಯಾಕೇಜ್‌ಗಳೂ ಕೂಡ ಕೇರಳ ಪ್ಯಾಕೇಜ್‌ನ ಶೇ25 ಕ್ಕಿಂತ ಕಡಿಮೆ ಇದೆ. ಆಟೋ ಚಾಲಕರಿಗೆ 2 ಸಾವಿರ ರೂ. ಘೋಷಣೆ ಮಾಡಿದೆ. ಇದನ್ನು ಪಡೆಯೋಕೆ ಚಾಲಕ 500 ರೂ. ಖರ್ಚು ಮಾಡಬೇಕು. ಕಟ್ಟಡ ಕಾರ್ಮಿಕರು ಎಲ್ಲಿಂದ ಸರ್ಟಿಫಿಕೇಟ್ ತರುತ್ತಾರೆ. ಬೀದಿಬದಿ ವ್ಯಾಪಾರಿಗಳು ಎಲ್ಲಿಂದ ದಾಖಲೆ ತರುತ್ತಾರೆ. ಅಷ್ಟು ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ವೇ?. ಈ ಪರಿಹಾರ ಪಡೆಯೋಕೆ ದಿನವೆಲ್ಲ ಓಡಾಡಬೇಕೆ?. ಎಲ್ಲ ಬಡವರಿಗೆ 10 ಸಾವಿರ ರೂ. ಅಕೌಂಟಿಗೆ ಹಾಕಿ ಎಂದು ಆಗ್ರಹಿಸಿದರು.
ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಕೊರತೆಯಿಂದ ಸಾಯುವ ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರ ಅವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ನೀಡುತ್ತಿದೆ. ಚಾಮರಾಜನಗರ ದುರಂತಕ್ಕೆ ಕರ್ನಾಟಕ ಕೇವಲ 2 ಲಕ್ಷ ರೂ. ಮಾತ್ರ ಪಾವತಿಸುತ್ತಿದೆ. ಕಲಬುರ್ಗಿ, ಕೋಲಾರ ಮತ್ತು ಇತರೆ ಹಲವು ಜಿಲ್ಲೆಗಳಲ್ಲಿ ಇದೇ ರೀತಿಯ ಸಾವುಗಳಿಗೆ ಏನೂ ಕಡಿಮೆ ಇಲ್ಲ. ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿರುವ ಕರ್ನಾಟಕವು ಈ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಏಕೆ ಕಡಿಮೆ ಮಾಡುತ್ತಿದೆ? ಎಂದು ಕಿಡಿ ಕಾರಿದರು.
ಪ್ರಿಯಾಂಕ್ ಖರ್ಗೆ ಕಿಡಿ: ಬಿಜೆಪಿ ನಾಯಕರು ಹಲವು ಸಲಹೆ ಕೊಡುತ್ತಾರೆ. ಬಿಸಿಲಿನಲ್ಲಿ 15 ನಿಮಿಷ ನಿಂತರೆ ಸೋಂಕು ಬರಲ್ವಂತೆ. ಹಾಗಾದರೆ ಕಲಬುರಗಿಯಲ್ಲಿ ಯಾಕೆ ಸೋಂಕು ಹೋಗುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದರು.
ಹರ್ಷವರ್ಧನ್ ರಾಮದೇವ್ ಜೊತೆ ಕುಳಿತು ಕರೋನಿಲ್ ಲಾಂಚ್ ಮಾಡುತ್ತಾರೆ. ಇದೇ ರಾಮದೇವ್ ಸ್ಟುಪಿಡ್ ಅಲೋಪತಿ ಅಂತ ವ್ಯಂಗಿಸ್ತಾರೆ. ಬಿಸಿಲಲ್ಲಿ ನಿಂತ್ರೆ ದೊಡ್ಡ ಆಸ್ಪತ್ರೆ ಯಾಕೆ ಬೇಕು?. ಯಡಿಯೂರಪ್ಪಗೆ ಮಣಿಪಾಲ್ ಆಸ್ಪತ್ರೆಯೇ ಬೇಕು. ಯಾಕೆ ಘೋಷಾಯ್ ಆಸ್ಪತ್ರೆಗೆ ಹೋಗಲ್ಲ? ಎಂದು ವಾಗ್ದಾಳಿ ನಡೆಸಿದರು.
ಪಾಸಿಟಿವ್ ಬಂದರೆ ಏಕೆ ಗೋಮೂತ್ರ ಕುಡಿಯಲಿಲ್ಲ, ಏಕೆ ಬೆಳ್ಳುಳ್ಳಿ ತಿಂದು ವಾಸಿ ಮಾಡಿಕೊಳ್ತಿಲ್ಲ. ಇವೆಲ್ಲ ಸಲಹೆ ಬಡವರಿಗೆ ಮಾತ್ರ ಹೇಳೋದು. ತಾವು ಹೋಗಿ ಮಣಿಪಾಲ್ ಸೇರೋದು, ಅಭಯ್ ಪಾಟೀಲ್ ಹೊಗೆ ಬೇರೆ ಹಾಕಿದರು. ಕೊರೊನಾ ಸೋಂಕು ತೊಲಗಲಿ ಎಂದು ಮಾಡಿದ್ರು, ಹೊಗೆಯಿಂದ ತೊಂದರೆ ಏನು ಅನ್ನೋದು ಗೊತ್ತಿಲ್ವೇ? ಎಂದು ಪ್ರಶ್ನಿಸಿದರು.