ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಕೊನೆಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಹೆಸರು ಘೋಷಿತವಾಗಿದೆ. ಆದರೆ ಈ ಸ್ಥಾನಕ್ಕೆ ಏರುವಲ್ಲಿ ಅವರು ಪಟ್ಟ ಪರಿಶ್ರಮ ಸಣ್ಣದೇನೂ ಅಲ್ಲ. ರಾಜಕೀಯವಾಗಿ ಸಾಕಷ್ಟು ಸುದೀರ್ಘ ಅನುಭವ ಹೊಂದಿರುವ ಶಿವಕುಮಾರ್ ರಾಷ್ಟ್ರೀಯ ಕಾಂಗ್ರೆಸ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎಂದು ಪ್ರಸಿದ್ಧಿ ಹೊಂದಿದ್ದಾರೆ ರಾಜ್ಯದ ಪಾಲಿಗೆ ಕನಕಪುರ ಬಂಡೆ ಎಂದೇ ಖ್ಯಾತಿಯಾಗಿದ್ದಾರೆ. ಕೆಪಿಸಿಸಿ ಗಾದಿಗೆ ಏರುವ ಹಾದಿಯಲ್ಲಿ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ಕೊನೆಗೂ ಹಟಕ್ಕೆ ಬಿದ್ದು ಅಧ್ಯಕ್ಷಗಾದಿ ಪಡೆಯುವಲ್ಲಿ ಸಫಲರಾಗಿದ್ದಾರೆ.
ರಾಜಕೀಯವಾಗಿ ಬೆಳೆದು ಬಂದ ದಾರಿ:
ಶಿವಕುಮಾರ್ ಬೆಳೆದು ಬಂದ ದಾರಿಯನ್ನು ಗಮನಿಸಿದರೆ, ಇವರು ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮೊದಲ ಪುತ್ರನಾಗಿ 1962ರ ಮೇ 15ರಂದು ಜನಿಸಿದರು. ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು. 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್ ಎಸ್ ಯುಐ ಸೇರ್ಪಡೆಗೊಂಡು ಅನತಿಕಾಲದಲ್ಲಿಯೇ ಬೆಂಗಳೂರು ಜಿಲ್ಲಾ ಘಟಕದ 1981-83ರ ಅವಧಿಗೆ ಅಧ್ಯಕ್ಷರಾದರು. ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಹೆಸರು ಮಾಡಿದರು.

1985ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡ ಹೆಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಭಲ ಸ್ಫರ್ಧೆ ನೀಡಿದ್ದರು. ಒಂದು ಅವರಿಗೆ ಅಂತಹ ರಾಜಕೀಯ ಅನುಭವವೇನು ಇರಲಿಲ್ಲ. ಆದಾಗ್ಯೂ ದೇವೇಗೌಡ್ರು ಪ್ರಯಾಸವಾಗಿ ಗೆಲ್ಲುವ ಸ್ಥಿತಿ ತಂದಿಟ್ಟಿದ್ದರು. ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡರು. 1989ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿ ಭರ್ಜರಿ ಗೆಲುವು ಸಾಧಿಸಿದರು. 1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸೋರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನದ್ಯೋತಕವಾಗಿ ಬಂಗಾರಪ್ಪನವರು ಡಿಕೆಶಿಯನ್ನು ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದರು.

ಅಲ್ಲಿಂದ ಈಚೆಗೆ ಡಿಕೆ ಶಿವಕುಮಾರ್ ಗೆ ಟ್ರಬಲ್ ಶೂಟರ್ ಎಂಬ ಹೆಸರು ಕೂಡ ಬಂತು. 1994ರಲ್ಲಿ ಪಕ್ಷದ ಟಿಕೆಟ್ ವಿರೋಧಿಸಲಾಯಿತು, ಆಗ ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿದರು. 2004ರಲ್ಲಿ ಡಿ.ಕೆ. ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಭಾರಿ ಆರಿಸಿ ಬಂದರೂ ಕೂಡ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತು. ಈ ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿಗೆ ಸ್ಥಾನವಿರಲಿಲ್ಲ, ಏಕೆಂದರೆ ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದೆಂದು ಹೆಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು. 2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ತೇಜಸ್ವಿನಿಗೌಡ ರವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ನಮ್ಮ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿ ವಿಲಾಸ್‍ರಾವ್‍ದೇಶ್‍ಮುಖ್ ಸಮ್ಮಿಶ್ರ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಶಾಸಕರ ಕುದುರೆ ವ್ಯಾಪಾರ ತಡೆಯಲು ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಡಿಕೆಶಿ, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ಬೆಂಗಳೂರಿನ ತಾರಾ ಹೋಟೆಲ್ ನಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು. ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರವಷ್ಟೇ ಮಹಾರಾಷ್ಟ್ರ ಶಾಸಕರನ್ನು ಕ್ಷೇಮವಾಗಿ ಕಳುಹಿಸಿಕೊಟ್ಟರು.


. ಬಂಡಾಯ ಶಾಸಕರಾಗಿಯೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದ ಶ್ರೀ ಡಿ.ಕೆ. ಶಿವಕುಮಾರ್ ಆಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದ ಎಸ್.ಎಂ. ಕೃಷ್ಣ ಅವರನ್ನು ಓಲೈಸಿ ಮರಳಿ ರಾಜಕೀಯರಂಗಕ್ಕೆ ಕರೆತಂದರು ಹಾಗೂ ಜನತಾದಳ ಅಧಿಕಾರದಲ್ಲಿದ್ದರೂ ಅಲ್ಪಮತದ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿದರು. ಜನತಾದಳದಿಂದಲೇ ಅಗತ್ಯವಾದ ಸದಸ್ಯರ ಬೆಂಬಲ ಸಿಗುವಂತೆ ವ್ಯೂಹ ರಚನೆ ಮಾಡಿದರು.
. ಎಸ್.ಎಂ. ಕೃಷ್ಣ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಸಂಗದ ಸಂಪೂರ್ಣಕೀರ್ತಿ, ಗೌರವ, ಡಿ.ಕೆ. ಶಿವಕುಮಾರ್ ಅವರ ವ್ಯೂಹರಚನೆಗೆ ಸಂದ ವಿಜಯ ಎಂದೇ ಭಾವಿಸಲಾಗುತ್ತಿದೆ.
. 1999ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾದರು.
1999ರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅನುಮತಿ ನೀಡಿತ್ತು. ಅಂದು ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೇ ಗೆದ್ದರು. ಎಸ್.ಎಂ. ಕೃಷ್ಣ ಅವರು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡಿದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ “ರಾಜೀವ್‍ಯುವ ಶಕ್ತಿ” ಸಂಘಟನೆಗಳು ರಾಜ್ಯದಲ್ಲಿ ತಲೆ ಎತ್ತಲು ಕಾರಣರಾದರು.

2008ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಪುನರ್ ರಾಜಕಾರಣಕ್ಕೆ ಬರಬೇಕು ಎಂದು ಬಯಸಿದಾಗ ಅವರನ್ನು ಕರೆತಂದು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಅವರನ್ನು ಆಯ್ಕೆಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದರು. ಮಂಡ್ಯದಿಂದ ಸಂಸದೆಯಾಗಿ ನಟಿ ರಮ್ಯಾ ಆಯ್ಕೆಯಾಗುವ ಹಿಂದೆ ಶಿವಕುಮಾರ್ ಶ್ರಮ ಇತ್ತು. 2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಕೆಲ ಕಾರಣದಿಂದ ಸಚಿವ ಸ್ಥಾನ ಕೈತಪ್ಪಿತು. ಆದರೆ ಏಳು ತಿಂಗಳ ನಂತರ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವರಾದರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನು ನೀಡಲಾಯಿತು.

ಈ ವೇಳೆಯಲ್ಲಿಯೇ ಮಂತ್ರಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಗಳು ಎದುರಾದವು. ತಮ್ಮ ಸಂಘಟನಾ ಶಕ್ತಿ, ರಾಜಕೀಯತಂತ್ರ ಹಾಗೂ ಚಾಣಾಕ್ಯ ನೀತಿ ಇವುಗಳನ್ನು ಧಾರಾಳವಾಗಿ ಬಳಸಿಕೊಂಡ ಡಿ.ಕೆ. ಶಿವಕುಮಾರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತ ಪೂರ್ವರೀತಿಯಲ್ಲಿ ವಿಜಯ ಸಾಧಿಸಲು ಕಾರಣೀಭೂತರಾದರಲ್ಲದೆ ಜನತಾದಳದಿಂದ ಎರಡು ಕ್ಷೇತ್ರಗಳನ್ನು ಕಸಿದುಕೊಂಡು ಕಾಂಗ್ರೆಸ್ಸಿಗೆ ಪ್ರತಿಷ್ಟೆಯನ್ನು ತಂದುಕೊಟ್ಟರು. 2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮೈತ್ರಿ ಸರ್ಕಾರದ ಉಳಿವಿಗೆ ಪಕ್ಷದ ನಾಯಕತ್ವ ತಮಗೆ ಜವಬ್ದಾರಿ ವಹಿಸಿದ ಅನೇಕ ಉಪಚುನಾವಣೆಗಳಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಂಡರು. 2017ರಲ್ಲಿ ಹೈಕಮಾಂಡ್ ವಹಿಸಿದ ಜವಬ್ದಾರಿಯ ಮೇರೆಗೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡರು ಹೈಕಮಾಂಡ್ ವಿಶ್ವಾಸ ಗೆದ್ದರು.

ಇಡಿ ದಾಳಿ, ನಿರಂತರ ತನಿಖೆ, ಜೈಲುವಾಸ ಅನುಭವಿಸಿ ಹೊರಬಂದಿರುವ ಶಿವಕುಮಾರ್ ಸಂಘಟನಾ ಶಕ್ತಿ ಬಗ್ಗೆ ವಿಶ್ವಾಸ ಇರಿಸಿಕೊಂಡಿರುವ ಪಕ್ಷ ಮಹತ್ವದ ಜವಾಬ್ದಾರಿ ನೀಡಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.