ಬೆಂಗಳೂರು: ಪಂಚಪೀಠದವರು ಎಲ್ಲರೂ ಸೇರಿ ಬಸವ ಧರ್ಮ ಆಗಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಆದ್ರೆ ನಮಗೆ ಸೌಲಭ್ಯ ಸಿಗುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮವಾದ್ರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಆದ್ರೆ ನಮಗೆ ಮುಸ್ಲಿಂ, ಜೈನ ಮಾದರಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಸಿಗುತ್ತದೆ. ವೀರಶೈವರನ್ನು ಸೇರಿಸಿಕೊಂಡು ಮುಂದುವರೆಯುತ್ತೇವೆ. ನಮ್ಮ ಚುನಾವಣಾ ಸೋಲಿಗೆ ಪ್ರತ್ಯೇಕ ಲಿಂಗಾಯತ ಧರ್ಮ ಕಾರಣವಲ್ಲ ಎಂದರು.
'ಪಾಲಿಕೆ ಚುನಾವಣೆ ಗೆಲ್ಲುತ್ತೇವೆ'
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಗಡಿ ಮತ್ತು ಭಾಷೆ ವಿಚಾರದಲ್ಲಿ ಪಕ್ಷದ ಮೇಲೆ ಚುನಾವಣೆ ಆಗುತ್ತಿರಲಿಲ್ಲ. ಮೊದಲ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುತ್ತಿದೆ. ಈ ಬಾರಿ ಅಧಿಕಾರ ಹಿಡಿಯಬೇಕು ಎಂದು ನಾವು ಕೆಲಸ ಮಾಡಿದ್ದೇವೆ. ಆಸೆ ಭಾವನೆಯಿಂದ ಕೆಲಸ ಮಾಡಿದ್ದೇವೆ. ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುವ ವಿಶ್ವಾಸ ಇದೆ ಎಂದು ವಿವರಿಸಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ವಿಚಾರ ಕುರಿತು ಮಾತನಾಡಿದ ಅವರು, ವ್ಯಾಕ್ಸಿನೇಷನ್ ಸರಿಯಾಗಿ ಸಿಗುತ್ತಿಲ್ಲ. ನಗರಗಳಲ್ಲೇ ಸರಿಯಾಗಿ ವ್ಯಾಕ್ಸಿನೇಷನ್ ಸಿಗುತ್ತಿಲ್ಲ. ವ್ಯಾಕ್ಸಿನೇಷನ್ ತಗೆದುಕೊಳ್ಳಲು ಜನ ಸಿದ್ದರಿದ್ದರೂ ಕೊಡಲು ನೀವು ಸಿದ್ದರಿಲ್ಲ. ಮೊದಲು ಅಗತ್ಯದಷ್ಟು ವ್ಯಾಕ್ಸಿನೇಷನ್ ಸಪ್ಲೈ ಮಾಡಿ. ನೋ ವ್ಯಾಕ್ಸಿನೇಷನ್, ನೋ ರೇಷನ್, ನೋ ಪೆನ್ಷನ್ ಅಂದ್ರೆ ಏನು ಅರ್ಥ? ಮೊದಲು ಅಗತ್ಯದಷ್ಟು ವ್ಯಾಕ್ಸಿನೇಷನ್ ಪೂರೈಕೆ ಮಾಡಿ ಎಂದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ RT-PCR ಟೆಸ್ಟ್ ಕಡ್ಡಾಯ: ಕರ್ನಾಟಕ ಸರ್ಕಾರದ ಆದೇಶ