ಬೆಂಗಳೂರು: ಕೋವಿಡ್ ಮೃತರ ಕುಟುಂಬಸ್ಥರಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ 50,000 ರೂ. ಪರಿಹಾರ ನೀಡಿದರೆ, ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಕೋವಿಡ್ ಮಹಾಮಾರಿ ದೇಶದ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಅಕಾಲಿಕ ಮರಣದಿಂದ ಉದ್ಯಮಗಳು ಸ್ಥಗಿತವಾಗಿವೆ. ಜನರು ವಲಸೆ ಹೋಗುವಂತಾಯಿತು. ಕುಟುಂಬಗಳು ತಮ್ಮ ಉಳಿತಾಯದ ಹಣವನ್ನು ಕಳೆದುಕೊಂಡಿದ್ದು, ಭಾರೀ ಸಾಲದ ಹೊರೆಯಲ್ಲಿ ಇದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ 50,000 ರೂ. ಅಲ್ಪ ಪರಿಹಾರ ಮೊತ್ತ ಮತ್ತು ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕಾರ ಘೋಷಿಸಿದ 1 ಲಕ್ಷ ರೂ. ಪರಿಹಾರ ಸಾಕಾಗುವುದಿಲ್ಲ. ಈ ಮುಂಚೆ ಕೇಂದ್ರ ಸರ್ಕಾರ ಕೋವಿಡ್ ಮೃತರ ಕುಟುಂಬಕ್ಕೆ 4 ಲಕ್ಷ ಕೊಡಲು ನಿರ್ಧರಿಸಿತ್ತು. ಬಳಿಕ ಹಣಕಾಸು ಕೊರತೆ ಕಾರಣ ಹೇಳಿ 4 ಲಕ್ಷ ಪರಿಹಾರ ನೀಡುವುದು ಕಷ್ಟ ಸಾಧ್ಯ ಎಂದು ವಾದ ಮಾಡಿತು. ಆದರೆ ದೊಡ್ಡ ಕಾರ್ಪೊರೇಟ್ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರ ನಾಗರಿಕರಿಗೆ ಪರಿಹಾರ ನೀಡಲು ನಿರಾಕರಿಸುತ್ತಿರುವುದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪದ್ಭರಿತ ರಾಜ್ಯವಾದ ನಾವು ನಮ್ಮ ರಾಜ್ಯದ ಜನರ ಹಿತಕಾಯುವುದು ನಮ್ಮ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿದ್ದ 4 ಲಕ್ಷ ರೂ. ಪರಿಹಾರ ಮೊತ್ತವನ್ನು ಅನುಷ್ಠಾನ ಮಾಡಬೇಕು ಎಂಬುದು ನಮ್ಮ ಆಗ್ರಹ. ಎಸ್ಡಿಆರ್ಎಫ್ ನಿಯಮದ ಪ್ರಕಾರ 4 ಲಕ್ಷ ಪರಿಹಾರದ ಪೈಕಿ ಶೇ.75 ಅಂದರೆ 3 ಲಕ್ಷ ರೂ. ಕೇಂದ್ರ ಸರ್ಕಾರ ನೀಡಬೇಕು. ಉಳಿದ 1 ಲಕ್ಷ ರೂ. ರಾಜ್ಯ ಸರ್ಕಾರದ ಪಾಲಾಗಿದೆ. ಹಾಗಾಗಿ ನೀವು ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂ. ಪರಿಹಾರ ನೀಡಬೇಕು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಈ ಹಿಂದಿನ 4 ಲಕ್ಷ ರೂ. ಪರಿಹಾರದ ಬಾಧ್ಯತೆ ಈಡೇರಿಸಲು ಪ್ರೇರೇಪಿಸಿದಂತೆ ಆಗುತ್ತದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಜೊತೆಗೆ ಈ ಕೂಡಲೇ ಕೊವಿಡ್ 19 ಸಾವಿನ ನೋಂದಣಿಯನ್ನು ಪರಿಷ್ಕರಿಸಲು ಒತ್ತಾಯಿಸುತ್ತೇನೆ. ಸರ್ಕಾರದ ನಿರ್ಲಕ್ಷ್ಯದಿಂದ ಕೋವಿಡ್ಗೆ ಹಲವು ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳಬೇಕಾಯಿತು. ಇದರ ಜೊತೆಗೆ ಸರ್ಕಾರ ವಾಸ್ತವ ಕೋವಿಡ್ ಸಾವಿನ ಸಂಖ್ಯೆಯನ್ನು ಮರೆ ಮಾಚಿದೆ. ಹೀಗಾಗಿ ಸಮೀಕ್ಷೆ ನಡೆಸಿ ಕೋವಿಡ್ ಸಾವಿನ ಬಗ್ಗೆ ನಿಖರ ಮಾಹಿತಿ ಕಲೆ ಹಾಕಬೇಕು ಎಂಬುದು ನನ್ನ ಆಗ್ರಹವಾಗಿದೆ. ಇದರಿಂದ ಪರಿಹಾರದಿಂದ ಹೊರಗುಳಿದ ಫಲಾನುಭವಿಗಳಿಗೂ ಪರಿಹಾರ ಮೊತ್ತ ಸಿಗುವಂತಾಗಲಿ. ಈ ನಿಟ್ಟಿನಲ್ಲಿ ನಾನು ನಿಮ್ಮ ಸಹಕಾರವನ್ನು ಮುಂದೆ ನೋಡುತ್ತಿದ್ದೇನೆ ಎಂದು ಪತ್ರದಲ್ಲಿ ಕೋರಿದ್ದಾರೆ.