ಬೆಂಗಳೂರು : ವಿಶ್ವವಿದ್ಯಾಲಯ ಕುಲಪತಿ ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳ ಹುದ್ದೆ ನೇಮಕಾತಿ ವೇಳೆ ಸಾಮಾಜಿಕ ನ್ಯಾಯ ಅನುಸರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿ ಎಸ್ ಯಡಿಯೂರಪ್ಪಗೆ ಪತ್ರ ಮೂಲಕ ಆಗ್ರಹಿಸಿದ್ದಾರೆ.
ಈ ಸಂಬಂಧ ರಾಜ್ಯಪಾಲರು, ಡಿಸಿಎಂ ಅಶ್ವತ್ಥ್ ನಾರಾಯಣ್ಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಮತ್ತು ಕರ್ನಾಟಕ ರಾಜ್ಯ ಮಾನವ ಧರ್ಮ ಪೀಠ ಸಭಾದ ಸ್ವಾಮೀಜಿಗಳು ಇಂದು ನನ್ನನ್ನು ಭೇಟಿ ಮಾಡಿದರು. ಈ ವೇಳೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ನ್ಯಾಯದ ಪ್ರಕಾರ, ಪರಿಶಿಷ್ಟ ಜಾತಿಗೆ ಸೇರಿದ ವಿದ್ವಾಂಸರುಗಳನ್ನು ಕುಲಪತಿಗಳಾಗಿ ನೇಮಕ ಮಾಡಿಲ್ಲ. ಕೆಪಿಎಸ್ಸಿ ಮತ್ತು ಸಂವಿಧಾನಿಕ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರುಗಳನ್ನು ನೇಮಕ ಮಾಡುವಾಗ ಸಾಮಾಜಿಕ ನ್ಯಾಯ ಅನುಸರಿಸಿಲ್ಲ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ 25 ವಿಶ್ವವಿದ್ಯಾಲಯಗಳಿದ್ದರೂ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಒಬ್ಬರನ್ನು ಬಿಟ್ಟು, ಉಳಿದ ಯಾವ ವಿವಿಗಳಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಕುಲಪತಿಗಳಿಲ್ಲ. ಇದು ಕರ್ನಾಟಕ ರಾಜ್ಯ ವಿವಿ ಕಾಯ್ದೆಯ ಪ್ರಕಾರ ಸಾಮಾಜಿಕ ನ್ಯಾಯವನ್ನು ಕಡ್ಡಾಯವಾಗಿ ಅನುಸರಿಸಬೇಕೆಂಬ ನ್ಯಾಯಕ್ಕೆ ವಿರುದ್ಧ ನಡೆಯಾಗಿದೆ.
ಹೀಗಾಗಿ ಈ ಕೂಡಲೇ ಖಾಲಿ ಇರುವ ಹಾಗೂ ಖಾಲಿಯಾಗುವ ವಿವಿ ಕುಲಪತಿಗಳ ಹುದ್ದೆಗೆ ಪರಿಶಿಷ್ಟ ಜಾತಿ ಮುಂತಾದ ದಮನಿತ ವರ್ಗಗಳಿಗೆ ಸಾಮಾಜಿಕ ನ್ಯಾಯದ ಆಧಾರದಲ್ಲಿ ನೇಮಕ ಮಾಡಬೇಕು. ಕೆಪಿಎಸ್ಸಿ ಸೇರಿ ಇತರ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಖಾಲಿ ಇರುವ ಹಾಗೂ ಖಾಲಿಯಾಗುವ ಅಧ್ಯಕ್ಷರು, ಸದಸ್ಯರುಗಳ ಹುದ್ದೆಗಳಿಗೆ ಸಾಮಾಜಿಕ ನ್ಯಾಯ ತತ್ವವನ್ನು ಗೌರವಿಸಿ, ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.