ಬೆಂಗಳೂರು: ಕರ್ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ಅಳವಡಿಸಿಕೊಂಡಿದ್ದೇವೆ. ಇಂದು ಅದಕ್ಕೆ ಬೆಂಕಿ ಕೊಳ್ಳಿ ಇಡುವ ಕೆಲಸ ಆರಂಭವಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಈ ಬಗ್ಗೆ ಹೇಳಿದ್ದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಹಿಂದೂ ಜಾತ್ರೆಗಳಲ್ಲಿ ಅನ್ಯಕೋಮಿನವರಿಗೆ ನಿಷೇಧ ಹೇರಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮತ್ತು ಅಂಗ ಸಂಸ್ಥೆಗಳು ಭಾವನಾತ್ಮಕ ವಿಚಾರಗಳನ್ಮು ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುತ್ತಿದೆ. ಅಶಾಂತಿ ವಾತಾವರಣದ ನಿರ್ಮಾಣ ಮಾಡುತ್ತಿವೆ. ಅಭಿವೃದ್ಧಿ ಪೂರಕ ಚರ್ಚೆ ಮಾಡಲು ಬಿಜೆಪಿಯವರ ಬಳಿ ಸರಕು ಇಲ್ಲ ಎಂದು ವ್ಯಂಗ್ಯವಾಡಿದರು.
ಉತ್ತರ ಭಾರತದ ಚುನಾವಣಾ ವಿಚಾರವನ್ನು ಕರ್ನಾಟಕಕ್ಕೆ ಪರಿಚಯಿಸುವ ಕೆಲಸ ಮಾಡ್ತಿದ್ದಾರೆ. ಮುಂದೆ ಏನೇನಾಗುತ್ತೋ ನನಗಂತೂ ಗೊತ್ತಿಲ್ಲ. ಕುವೆಂಪು ಹೇಳಿದ್ದ ಸರ್ವ ಜನಾಂಗದ ಶಾಂತಿಯ ತೋಟ ಸರ್ವನಾಶ ಮಾಡಿದ್ದಾರೆ. ಕೋಮು ಸಂಘರ್ಷಕ್ಕೆ ಇದೆಲ್ಲ ಮಾಡ್ತಿದ್ದಾರೆ. ಕರಾವಳಿಯ ಸಂಘರ್ಷವನ್ನು ಇಡೀ ರಾಜ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿ ಪ್ರದೇಶಗಳಲ್ಲಿ ಇದ್ದ ಅವರ ರಾಜಕೀಯ ಡ್ರಾಮಾವನ್ನು ಈಗ ಹಂತ ಹಂತವಾಗಿ ತೆಗೆದುಕೊಂಡು ಹೊರಟಿದ್ದಾರೆ. ಅದಕ್ಕೆ ಜನರು ಅಂತಿಮವಾಗಿ ಯಾವ ತೀರ್ಮಾನ ತೆಗೆದುಕೊಳ್ತಾರೆ ಕಾದು ನೋಡಬೇಕು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಆಡಳಿತದಲ್ಲಿ ಜನ ಸಂಪದ್ಭತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಬೆಲೆ ಏರಿಕೆ ಬಗ್ಗೆ ಈಗ ಜನ ಪ್ರತಿಭಟನೆ ಮಾಡ್ತಾ ಇಲ್ಲ. ನಾವು ಸಂಘಟನೆ ಮಾಡಿ ಹೋರಾಟ ಮಾಡಬೇಕಿದೆ. ಇಲ್ಲವಾದರೆ ಜನ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡ್ತಾ ಇಲ್ಲ. ಜನ ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಏನು ದುರಂತ ಕಾದಿದೆಯೊ ಗೊತ್ತಿಲ್ಲ. ಜನರಿಗೆ ಬೆಲೆ ಏರಿಕೆ ವಿಚಾರವೇ ಬೇಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್ಗೆ ನೋಟಿಸ್ ಜಾರಿ