ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು. ಆಗವರು ಬರಲಿಲ್ಲ. ಬೆಂಗಳೂರಿಗೆ ಬಂದಾಗ ಸರ್ವೆ ಕಾರ್ಯಕ್ಕೆ ಮುಂದಾಗಬೇಕಿತ್ತು. ಆದರೂ ಅದ್ಯಾವುದನ್ನು ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸೆ. 7ರಂದು ಪ್ರಧಾನಿ ಬರುತ್ತಾರೆ, ಹಣ ಬಿಡುಗಡೆ ಮಾಡಿಸ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಮೋದಿ ಅವರು ಬಂದ್ರು, ಯಾರನ್ನು ಭೇಟಿ ಮಾಡಿದ್ರು ಗೊತ್ತಾಗಲಿಲ್ಲ. ಯಡಿಯೂರಪ್ಪ ಬರಮಾಡಿಕೊಂಡಿದ್ದಷ್ಟೇ ಗೊತ್ತು ಎಂದು ವ್ಯಂಗ್ಯವಾಡಿದರು.
₹ 38 ಸಾವಿರ ಕೋಟಿ ನಷ್ಟ ಅಂತ ಹೇಳಲಾಗ್ತಿದೆ. ನನ್ನ ಪ್ರಕಾರ ₹1 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಬಿಜೆಪಿ ನಾಯಕರಿಗೆ ಒತ್ತಾಯ ಮಾಡುವ ತಾಕತ್ತಿಲ್ಲ. ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲಿಲ್ಲ. ಇತ್ತ ಸದನವನ್ನೂ ಕರೆಯಲಿಲ್ಲ. ಬಿಜೆಪಿಯವರು ದಪ್ಪ ಚರ್ಮದವರು. ಮೋದಿ ಬಡವರ ಪರವಲ್ಲ, ಶ್ರೀಮಂತರ ಪರ. ವಿದೇಶ ಪ್ರವಾಸಕ್ಕೆ ನೀಡುವಷ್ಟು ಆದ್ಯತೆ ಜನರ ಕಣ್ಣೀರಿಗೆ ನೀಡುತ್ತಿಲ್ಲ. ಜನರ ಕಷ್ಟ ಕೇಳದ ಮೋದಿ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದರು.
ಈಶ್ವರಪ್ಪ ಪೆದ್ದ: ಈಶ್ವರಪ್ಪ ಪೆದ್ದನ ಥರ ಮಾತನಾಡ್ತಾನೆ. ಅದಕ್ಕೆ ಅವನ ಹೇಳಿಕೆಗೆ ಉತ್ತರ ಕೊಡಲ್ಲ. ₹ 10 ಸಾವಿರ ಕೊಡೋದೆ ದೊಡ್ಡದಾಗಿದೆ ಎಂದು ಸಂತ್ರಸ್ತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎರಡೇ ದಿನದಲ್ಲಿ ₹ 1,600 ಕೋಟಿ ಕೊಟ್ಟಿದ್ರು. ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ಟರೆ ಮತ್ತೇನಿಲ್ಲ ಎಂದು ಟೀಕಿಸಿದರು.
ಯೋಗೇಶ್ ಗೌಡ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆ ಕೇಸ್ ಮುಕ್ತಾಯವಾಗಿದೆ. ಅವರು ಇಲ್ಲೇ ಗೂಟ ಹೊಡೆದುಕೊಂಡಿರ್ತೇವೆ ಅಂದುಕೊಂಡಿದ್ದಾರೆ. ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಇದು ಬಿಜೆಪಿಯವರಿಗೆ ಗೊತ್ತಿಲ್ಲ ಅನ್ನಿಸುತ್ತಿದೆ. ಅವರು ಏನು ಬೇಕಾದರೂ ಮಾಡಲಿ. ಡಿಕೆಶಿ ಬಂಧನವೇ ಅಲ್ಲ. ಚಿದಂಬರಂ ಬಂಧಿಸಿದ್ದೂ ಸರಿಯಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.