ಬೆಂಗಳೂರು: ಕರ್ನಾಟಕ ಸಿನೆಮಾ ನಿಯಂತ್ರಣ ನಿಯಮಗಳು-2021 (ತಿದ್ದುಪಡಿ) ತರಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕರ್ನಾಟಕ ಸಿನೆಮಾ ನಿಯಂತ್ರಣ ನಿಯಮಗಳು- 2021 (ತಿದ್ದುಪಡಿ) ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಇಂದು ವಿಕಾಸಸೌಧದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964ರಲ್ಲಿ ರಚನೆಯಾಗಿದ್ದು, ಈಗ ಮತ್ತೆ ವಿಧೇಯಕ ತರಲಾಗುತ್ತಿದೆ ಎಂದರು.
ಹಿಂದೆ ಸಿನಿಮಾ ಹೇಗೆ ನಡೆಸುತ್ತಿದ್ದರು ಎಂಬುದು ಗೊತ್ತಿದೆ. ಪ್ರೊಜೆಕ್ಟರ್ ಹಾಕಲು ದೊಡ್ಡ ರೂಂ ಬೇಕಿತ್ತು. ಈಗ ಹೈಟೆಕ್ ಆಗಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಇಬ್ಬರು ಇದ್ದರೆ ಸಾಕಾಗಿದೆ. ಹೊಸ ತಂತ್ರಜ್ಞಾನ ಬಂದಿದ್ದು, ಯಾವ ರೀತಿ ಮಾಡಬಹುದೆಂದು ಸಮಾಲೋಚನಾ ಸಭೆ ಮಾಡಲಾಗಿದೆ. ಅಗ್ನಿಶಾಮಕ, ಬೆಸ್ಕಾಂ, ಪೊಲೀಸ್ ಅಧಿಕಾರಿಗಳ ಸಲಹೆ ಪಡೆಯಲಾಗಿದೆ. ಸಿನಿಮಾದವರ ಸಲಹೆಯನ್ನೂ ಪಡೆಯಲಾಗಿದ್ದು, ಹೊಸ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಲೈಸೆನ್ಸ್ ನವೀಕರಣ ಮಾಡುವುದು ಉದ್ದೇಶವಿದೆ. ಆಪರೇಟರ್ ಈಗ ಹತ್ತು ಕರ್ಟನ್‌ಗಳಿಗೆ ಇಬ್ಬರು ಇದ್ದರೆ ಸಾಕು. ಲೈಸೆನ್ಸ್ ಶುಲ್ಕ ಒಂದು ವರ್ಷಕ್ಕೊಮ್ಮೆ ಇತ್ತು. ಈಗ ಐದು ವರ್ಷಗಳಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಪೈರಸಿ ತಡೆಗೆ ಕ್ರಮ ಜಂಟಿ ತಂಡ ರಚನೆ:
ಇತ್ತೀಚೆಗೆ ಹೆಚ್ಚಾಗಿರುವ ಪೈರಸಿ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಕೋಟ್ಯಾಂತರ ರೂ. ಹಣ ಹಾಕಿ ಸಿನಿಮಾ ಮಾಡ್ತಾರೆ. ಆದರೆ ಅದನ್ನು ದುರ್ಬಳಕೆ ಮಾಡುವವರು ಹೆಚ್ಚಾಗಿದೆ. ಅಂತಹವರನ್ನು ಗುರುತಿಸಿ ಜೈಲಿಗಟ್ಟಬೇಕಿದೆ. ಹಾಗಾಗಿ, ಸಿಸಿಬಿ ಮತ್ತು ಸೈಬರ್ ವಿಭಾಗದ ಜಂಟಿ ತಂಡ ರಚನೆ ಮಾಡಲಾಗಿದೆ. ಅವರ ನೇತೃತ್ವದಲ್ಲಿ ನಿಗಾ ವಹಿಸಲಾಗುವುದು.
ಸಿನಿಮಾ ಕಾಪಿರೈಟ್ ಮಾಡಿದರೆ, ಪೈರಸಿ ಮಾಡಿದರೆ ಎಷ್ಟು ವರ್ಷ ಶಿಕ್ಷೆ ನೀಡಬೇಕೆಂಬುದು ಚರ್ಚೆಯಾಗಿದೆ. ಇಷ್ಟು ದಿನ ಯಾರೂ ದೂರು ನೀಡಿರಲಿಲ್ಲ. ಈಗ ದೂರು ನೀಡಿದ್ದಾರೆ. ಕನ್ನಡ ಸಿನಿಮಾ ರಕ್ಷಿಸಬೇಕಿದೆ ಎಂದು ಹೇಳಿದರು.
ಕೈದಿಗಳಿಗೆ ಅಕ್ಷರ ಜ್ಞಾನ:
ಕರ್ನಾಟಕದ ಜೈಲಿನಲ್ಲಿರುವ ಅನಕ್ಷರಸ್ಥ ಕೈದಿಗಳಿಗೆ ನ.1 ರಿಂದ ಅಕ್ಷರ ಜ್ಞಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು. ರಾಜ್ಯದಲ್ಲಿ 50 ಜೈಲುಗಳಲ್ಲಿ 16,000 ಕೈದಿಗಳು ಇದ್ದಾರೆ. ಈ ಪೈಕಿ ಅಂದಾಜು 6 ಸಾವಿರ ಕೈದಿಗಳು ಅನಕ್ಷರಸ್ಥರಿದ್ದಾರೆ. ಅವರಿಗೆ ಬಂಧಿಖಾನೆ ಡಿಜಿಪಿ ನೇತೃತ್ವದಲ್ಲಿ ಶಿಕ್ಷಣ ನೀಡುವ ಕೆಲಸ ಆಗಲಿದೆ. ಜೈಲಿನ ಒಳಗಡೆ ಇರುವ ಅಕ್ಷರಸ್ಥ ಕೈದಿಗಳನ್ನು ಬಳಕೆ ಮಾಡಿಕೊಂಡು ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಕಲಿಸಲಾಗುತ್ತದೆ. ಅವರಿಗೆ ಗೌರವ ಧನ ಸಹ ನೀಡಲಾಗುವುದು ಎಂದರು.
ಕನ್ನಡ ಬಳಕೆ:
ಪೊಲೀಸ್ ಕವಾಯತು ಸಂದರ್ಭದಲ್ಲಿ ಕನ್ನಡ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಕವಾಯತ್ತು ಮಾಡುವಾಗ ಇಂಗ್ಲೀಷ್ ಕಾಷನ್ ಕೊಡಲಾಗುತ್ತಿತ್ತು. ನ.1ರಿಂದ ಅದನ್ನು ಕನ್ನಡದಲ್ಲಿ ಮಾಡುವ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಇದೇ ಸಂದರ್ಭ ಸಚಿವರು ತಿಳಿಸಿದರು.