ಬೆಂಗಳೂರು: ರಾಜ್ಯ ಸರ್ಕಾರ ಬಿಸಿಯೂಟದ ಬದಲು ಪ್ರತಿ ವಿದ್ಯಾರ್ಥಿಗೆ ಆಯಾ ದಿನದ ಆಹಾರ ಪ್ರಮಾಣಕ್ಕೆ ಅನುಗುಣವಾಗಿ ಧಾನ್ಯಗಳನ್ನು ವಿತರಣೆ ಮಾಡಲು ಸರ್ಕಾರ ಆದೇಶಿಸಿತ್ತು. ಸದರಿ ಆದೇಶದಂತೆ ಉಳಿದಿರುವ 108 ದಿನಗಳಿಗೆ ಸರಿಯಾಗಿ ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಗಿದೆ.
ಲಾಕ್ಡೌನ್ನಿಂದಾಗಿ ಶಾಲೆಗಳಿಗೆ ರಜೆ ಘೋಷಿಸಿದ ಕಾರಣ ಬಡ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಮುಂದುವರೆಸುವಂತೆ ಕೋರಿದ್ದರು. ಬಿಸಿಯೂಟ ಪಡೆಯಲು ಮಕ್ಕಳು ಅಥವಾ ಪೋಷಕರು ಪ್ರತಿ ದಿನ ಶಾಲೆಗೆ ಬರುವುದರಿಂದ ಗುಂಪುಗೂಡುವ ಸಾಧ್ಯತೆ ಹೆಚ್ಚು ಎಂಬುವುದನ್ನ ಅರಿತ ಸರ್ಕಾರ, ಬಿಸಿಯೂಟದ ಬದಲು ಪ್ರತಿ ವಿದ್ಯಾರ್ಥಿಗೆ ಆಯಾ ದಿನದ ಆಹಾರ ಪ್ರಮಾಣಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಆದೇಶಿಸಿತ್ತು.
ಈಗಾಗಲೇ ಶೈಕ್ಷಣಿಕ ವರ್ಷದ ಮೊದಲ ಹಂತ ಮುಗಿದಿದ್ದು, ಮುಂದಿನ ಭಾಗವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಆಹಾರ ಧಾನ್ಯವನ್ನ ನೀಡುವಂತೆ ಆದೇಶಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 108 ದಿನಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ.
ಎರಡು ಹಂತದಲ್ಲಿ ಧಾನ್ಯಗಳನ್ನು ವಿತರಿಸಲು ಸೂಚಿಸಿದ್ದು, 1-8ನೇ ತರಗತಿ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸುವಾಗ ಒಟ್ಟು 53 ದಿನಗಳಲ್ಲಿ 45 ದಿನಗಳಿಗೆ ಅಕ್ಕಿ ಮತ್ತು 8 ದಿನಗಳಿಗೆ ಗೋಧಿಯನ್ನು ಮತ್ತು 9 ಮತ್ತು 10ನೇ ತರಗತಿಯವರೆಗೆ 53 ದಿನಗಳಿಗೂ ಅಕ್ಕಿಯನ್ನು ವಿತರಿಸುವಂತೆ ಸೂಚಿಸಲಾಗಿದೆ.
ತರಗತಿವಾರು ಧಾನ್ಯ ವಿತರಣಾ ವಿವರ
1ರಿಂದ 5ನೇ ತರಗತಿ
ಅಕ್ಕಿ 4 ಕೆಜಿ, 500 ಗ್ರಾಂ( 45 ದಿನಗಳಿಗೆ)
800 ಗ್ರಾಂ ಗೋಧಿ( 8 ದಿನಗಳಿಗೆ)
3 ಕೆಜಿ 74 ಗ್ರಾಂ ತೊಗರಿ ಬೇಳೆ(ಪ್ರತಿ ದಿನಕ್ಕೆ 58 ಗ್ರಾಂನಂತೆ)
6ರಿಂದ 8ನೇ ತರಗತಿ
ಅಕ್ಕಿ 6 ಕೆಜಿ, 750 ಗ್ರಾಂ( 45 ದಿನಗಳಿಗೆ)
1 ಕೆಜಿ 200 ಗ್ರಾಂ ಗೋಧಿ( 8 ದಿನಗಳಿಗೆ)
4 ಕೆಜಿ 611 ಗ್ರಾಂ ತೊಗರಿ ಬೇಳೆ(ಪ್ರತಿ ದಿನಕ್ಕೆ 87 ಗ್ರಾಂನಂತೆ)
9ರಿಂದ 10ನೇ ತರಗತಿ
ಅಕ್ಕಿ 7 ಕೆಜಿ, 950 ಗ್ರಾಂ ( 53 ದಿನಗಳಿಗೆ)
4 ಕೆಜಿ 611 ಗ್ರಾಂ ತೊಗರಿ ಬೇಳೆ(ಪ್ರತಿ ದಿನಕ್ಕೆ 87 ಗ್ರಾಂನಂತೆ)