ಬೆಂಗಳೂರು : ಎಫ್ಕೆಸಿಸಿಐನ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಮತ್ತು ಉಪಾಧ್ಯಕ್ಷ ಗೋಪಾಲ್ ರೆಡ್ಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ, ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಪರಿಹಾರ ಪ್ಯಾಕೇಜ್ ಕೋರಿ ಪತ್ರವನ್ನು ಸಲ್ಲಿಸಿದರು.
ಕೈಗಾರಿಕೆಗಳಿಗೆ 3 ತಿಂಗಳ ಅವಧಿಗೆ ಬೆಸ್ಕಾಮ್ ಮತ್ತು ಎಸ್ಕಾಮ್ ವಿಧಿಸುವ ವಿದ್ಯುತ್ ಮೇಲಿನ ಸ್ಥಿರ ಶುಲ್ಕ ಮನ್ನಾ, ಎಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್‌ಗಳ ಪಾವತಿಯನ್ನು 3 ತಿಂಗಳ ಅವಧಿಗೆ ಮುಂದೂಡಬೇಕು ಎಂದು ಮನವಿ ಮಾಡಿಕೊಂಡರು.
ವಿವಿಧ ಪರವಾನಿಗೆಗಳ ಎಲ್ಲಾ ನವೀಕರಣವನ್ನು ಸ್ಥಗಿತಗೊಳಿಸಿ ಮುಂದೂಡಬೇಕು, ವ್ಯಾಪಾರ ಮತ್ತು ಕೈಗಾರಿಕೆಗಳು 1 ವರ್ಷದ ಅವಧಿಗೆ ತೆಗೆದುಕೊಳ್ಳಬೇಕಾದ ಪರವಾನಿಗೆಗಳಿಗೆ ವಿನಾಯ್ತಿ ನೀಡಬೇಕು ಎಂದು ಕೇಳಿಕೊಂಡರು.
ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗಾಗಿ ಬಿಬಿಎಂಪಿ/ಸ್ಥಳೀಯ ಸಂಸ್ಥೆಗಳು / ಪಂಚಾಯತ್‌ಗಳಿಗೆ ಆಸ್ತಿ ತೆರಿಗೆಯನ್ನು 50% ರಷ್ಟು ಕಡಿತಗೊಳಿಸಬೇಕು ಎಂದು ವಿನಂತಿಸಿದರು.
ಎಂಎಸ್ಎಂಇ ವ್ಯಾಪಾರ / ಉತ್ಪಾದನೆ ವ್ಯವಹಾರಗಳ ನೌಕರರ ವೇತನವನ್ನು 3 ತಿಂಗಳ ಅವಧಿಗೆ ಮರುಪಾವತಿಸಲು ರಾಜ್ಯ ಸರ್ಕಾರಕ್ಕೆ ಕೇಳಿಕೊಂಡರು.
ಬೆಂಗಳೂರು ನಗರದ ಎಲ್ಲಾ ಕೈಗಾರಿಕಾ ಸಂಸ್ಥೆಗಳು 2021ರ ಜೂನ್ 1 ರಿಂದ ಸರ್ಕಾರವು ಹೊರಡಿಸಿದ ಎಲ್ಲಾ ಕೋವಿಡ್-19 ಸಂಬಂಧಿತ ಎಸ್‌ಒಪಿಗಳನ್ನು ಅನುಸರಿಸುವ ಮೂಲಕ ಕಾರ್ಯನಿರ್ವಹಿಸಲು ಪ್ರಾರಂಭಿಸಲು ಅನುಮತಿ ಕೊಡಬೇಕು.
ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ವೀಕರಿಸಿ ಮತ್ತು ಎರಡು ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾಗಿ ತಿಳಿಸಿದರು.
ಕೋವಿಡ್ ರೋಗಿಗಳಿಗೆ ಹೋಮ್ ಐಸೊಲೇಷನ್ ಟ್ರೀಟ್ಮೆಂಟ್, ಬೆಂಗಳೂರು ನಗರದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಕಿಟ್ಗಳನ್ನು ವಿತರಿಸಲು ಮುಂದಾಗಿರುವ ಎಫ್‌ಕೆಸಿಸಿಐ ನಡೆಯನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ ಎಂದು ಅಧ್ಯಕ್ಷರಾದ ಪೆರಿಕಲ್ ಎಂ.ಸುಂದರ್ ಇದೇ ವೇಳೆ ಹೇಳಿದರು.