ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದಾರೆ. 2.65 ಲಕ್ಷ ಕೋಟಿಯ ಬೃಹತ್ ಬಜೆಟ್ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿಯ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಫ್ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಐ.ಎಸ್ ಪ್ರಸಾದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮತೋಲನವಾದ ಬಜೆಟ್ ಮಂಡಿಸಿದ್ದಾರೆ. ಮೂಲಸೌಕರ್ಯ, ಶಿಕ್ಷಣ, ಕೃಷಿ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಬಜೆಟ್ ಅನ್ನು ಕರ್ನಾಟಕ ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸುತ್ತದೆ ಎಂದರು.
ಕೈಗಾರಿಕೋದ್ಯಮಕ್ಕೆ 56 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಈ ಆಯವ್ಯಯದಿಂದ ಜಿ ಎಸ್ ಟಿ ಸಂಗ್ರಹ ಹೆಚ್ಚಳವಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ 31 ಸಾವಿರ ಕೋಟಿ, ಆರೋಗ್ಯ ಕ್ಷೇತ್ರಕ್ಕೆ 13 ಸಾವಿರ ಕೋಟಿ, ಕೃಷಿ ವಲಯಕ್ಕೆ 36 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಇದು ಉತ್ತಮ ನಿರ್ಧಾರ ಎಂದು ಹೇಳಿದರು.
ಪ್ರಾಪರ್ಟಿ ಟ್ಯಾಕ್ಸ್ ಕಡಿತ ಮಾಡುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿರುವು ಸ್ವಾಗತಾರ್ಹ. ಆದರೆ ಜಲಯೋಜನೆ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡಿಲ್ಲ. ಬಡ್ಡಿ ರಹಿತ ಸಾಲ ನೀಡುವಂತೆಯೂ ಮನವಿ ಮಾಡಿದ್ದೆವು ಎಂದು ತಿಳಿಸಿದರು.
ಕೇಂದ್ರದ ಮಾದರಿಯ ರಾಜ್ಯ ಬಜೆಟ್: ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಬಜೆಟ್ ಮಂಡಿಸಲಾಗಿದೆ. ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿಯೂ ಕೆಲ ಯೋಜನೆಗಳನ್ನು ಘೋಷಿಸಿದ್ದಾರೆ. ಬೆಂಗಳೂರು ಅಭಿವೃದ್ದಿಯಾದರೆ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗುತ್ತದೆ. ಸಣ್ಣ ಕೈಗಾರಿಕೆಗೆ ಬಡ್ಡಿ ರಹಿತ ಸಾಲ ಹೊಟೇಲ್, ಆಸ್ಪತ್ರೆ ವಲಯಕ್ಕೆ ಲೈಸನ್ಸ್ ಫೀ ಕಡಿಮೆ ಮಾಡುವಂತೆ ಮನವಿ ಮಾಡಿದ್ದೆವು. ಬಜೆಟ್ನಲ್ಲಿ ಅಲ್ಪಮಟ್ಟಿಗೆ ಎಲ್ಲದಕ್ಕೂ ಸಿಎಂ ಸ್ಪಂದಿಸಿದ್ದಾರೆ ಎಂದರು.
ಬಜೆಟ್ಗೆ ಹೋಟೆಲ್ ಉದ್ಯಮ ವಿರೋಧ: ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಸಿಎಂ ಬೊಮ್ಮಾಯಿ ಅವರ ಬಜೆಟ್ ಬಹಳ ಬೇಸರ ತರಿಸಿದೆ. ಪ್ರೊಫೆಷನಲ್ ಟ್ಯಾಕ್ಸ್ ಕಡಿತದ ನಿರೀಕ್ಷೆ ಇತ್ತು. ಆದರೆ, ಬಜೆಟ್ನಲ್ಲಿ ಇದನ್ನು ಮಾಡಲಾಗಿಲ್ಲ. ಜಿಎಸ್‌ಟಿ ಲೈಸೆನ್ಸ್ ರೀತಿಯಲ್ಲಿ ಹಲವು ಲೈಸೆನ್ಸ್ ಇದೆ. ಇದರ ಜೊತೆಗೆ ಟ್ರೇಡ್ ಲೈಸೆನ್ಸ್ ಕೂಡ ಇದೆ. ಟ್ರೇಡ್ ಲೈಸೆನ್ಸ್ ಅನ್ನು ಕೈ ಬಿಡಬೇಕು ಎಂದು ಕೇಳಿಕೊಂಡಿದ್ದೆವು. ಅದನ್ನೂ ಮಾಡಿಲ್ಲ ಎಂದು ಬೇಸರಿಸಿದರು. ಎಂದು ಬೇಡಿಕೆ ಈಡೇರದಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೊಸ ಯೋಜನೆಗಳ ಮಹಾಪೂರ: ವಿವಿಧ ಯೋಜನೆಗಳಿಗೆ ಸಿಕ್ಕ ಅನುದಾನದ ಸಂಪೂರ್ಣ ವಿವರ