ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿಯವರ ಮೊಬೈಲ್ ಕಸಿದು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳ 6ರಂದು ಡಾಲರ್ಸ್ ಕಾಲೋನಿಯಲ್ಲಿ ವಾಕಿಂಗ್ಗೆ ತೆರಳಿದ್ದ ವೇಳೆ ಶೃತಿ ಅವರ ಮೊಬೈಲ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ನಂತರ ಮೊಬೈಲ್ ಅನ್ನು ಪಾದರಾಯನಪುರದಲ್ಲಿ ಮಾರಾಟ ಮಾಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಜಬೀ, ಅಸ್ಲಂ, ಮೊಹೀನ್, ಶೇಕ್ ಇಲಿಯಾಸ್ ಜೊತೆಗೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿಗಳ ವಿಚಾರಣೆ ನಡೆಸಿ 30 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಮೊಯಿನ್ ಎಂಬಾತ ಪಾದರಾಯನಪುರದ ಅಸ್ಲಂಗೆ ಕದ್ದ ಮೊಬೈಲ್ಗಳನ್ನು ಮಾರುತ್ತಿದ್ದ. ಅಸ್ಲಂ ಎಂಬಾತ ಮೊಯಿನ್, ಜಬಿ ಸೇರಿದಂತೆ ಸಾಕಷ್ಟು ಹುಡುಗರನ್ನು ಮೊಬೈಲ್ ಕಳ್ಳತನ ಮಾಡಲು ಮುಂಗಡ ಹಣ ಕೊಟ್ಟು ಇಟ್ಟುಕೊಂಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: ಬಂಟ್ವಾಳ: ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರಿಗೆ ಗಾಯ
ಬಂಧಿತರ ವಿಚಾರಣೆ ವೇಳೆ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳೂ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಮೊಬೈಲ್ ಎಗರಿಸಲು ಈ ಗ್ಯಾಂಗ್ ಕದ್ದ ಬೈಕ್ ಹಾಗೂ ನಂಬರ್ ಪ್ಲೇಟ್ ಬಳಸುತ್ತಿದ್ದುದು ಗೊತ್ತಾಗಿದೆ.