ಬೆಂಗಳೂರು: ನಗರದ ಹೊರವಲಯದ ಮನೆಯಲ್ಲಿ ಒಂದೇ ಕುಟುಂಬದ ಐವರು ಶವಗಳು ಪತ್ತೆಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯದಲ್ಲಿ ಘಟನೆ ನಡೆದಿದೆ.
ಕೌಟುಂಬಿಕ ಕಲಹ ಕಾರಣ:
ಬ್ಯಾಡರಹಳ್ಳಿಯ ಚೇತನ್ ಸರ್ಕಲ್ 4ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಶಂಕರ್ ಎಂಬುವವರ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿರುವ ಅನುಮಾನವಿದೆ.
9 ತಿಂಗಳ ಮಗುವನ್ನು ಮೊದಲು ಸಾಯಿಸಿದ್ದರು:
ಶಂಕರ್ ಪತ್ನಿ, ಓರ್ವ ಮಗ, ಇಬ್ಬರು ಹೆಣ್ಣುಮಕ್ಕಳು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. 9 ತಿಂಗಳ ಮಗುವನ್ನು ಮೊದಲು ಸಾಯಿಸಿ ಬಳಿಕ ಇಡೀ ಕುಟುಂಬ ಸಾವಿಗೆ ಶರಣಾಗಿದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಐದು ದಿನದ ಹಿಂದೆಯೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ದೊರೆತಿವೆ. ಶಂಕರ್ ಅವರ ಪತ್ನಿ ಭಾರತಿ (50), ಇಬ್ಬರು ಪುತ್ರಿಯರಾದ ಸಿಂಚನ (33), ಸಿಂಧುರಾಣಿ (30), ಮಗ ಮಧು ಸಾಗರ (27) ಹಾಗೂ 9 ತಿಂಗಳ ಮಗುವಿನ ಮೃತದೇಹಗಳು ಪತ್ತೆಯಾಗಿವೆ.
5 ದಿನದಿಂದ ಶವಗಳ ಮಧ್ಯೆ ಮರುಗಿದ ಕಂದಮ್ಮ:
ಮನೆಯಲ್ಲಿ ಒಟ್ಟು 6 ಮಂದಿ ಇದ್ದರು. ಇವರಲ್ಲಿ 5 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, 3 ವರ್ಷದ ಒಂದು ಮಗು ಮಾತ್ರ ಬದುಕುಳಿದಿದೆ. 5 ದಿನಗಳಿಂದ ಆಹಾರವಿಲ್ಲದೆ ನಿತ್ರಾಣವಾಗಿದ್ದ ಮಗುವನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಿಗಳರ ಪಾಳ್ಯದ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಮನೆ ದೊಡ್ಡದಾಗಿದ್ದರಿಂದ ಮಗುವಿನ ಚೀರಾಟ ನೆರೆಹೊರೆ ಮನೆಯವರಿಗೂ ಗೊತ್ತಾಗಿಲ್ಲ. ಐದು ದಿನಗಳಿಂದ ಒಂಟಿಯಾಗಿ ಅತ್ತು-ಅತ್ತು ಮಗು ಸುಸ್ತಾಗಿ ನಿತ್ರಾಣ ಸ್ಥಿತಿಯಲ್ಲಿತ್ತು.
ಪೊಲೀಸ್ ಅಧಿಕಾರಿ ಸೌಮೇಂದು ಮುಖರ್ಜಿ ಹೇಳಿಕೆ:
ಈ ದುರಂತದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ, 'ಇಂದು ಸಂಜೆ ಶಂಕರ್ ಎಂಬುವರು ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಂಕರ್ ಮನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. 9 ವರ್ಷದ ಮಗು ಹೇಗೆ ಮೃತಪಟ್ಟಿದೆ ಎಂಬುದು ವೈದ್ಯಕೀಯ ವರದಿ ಬಂದ ಬಳಿಕ ಗೊತ್ತಾಗಲಿದೆ. ಇನ್ನುಳಿದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ' ಎಂದರು.
'ಮೂರ್ನಾಲ್ಕು ದಿನದಿಂದ ಕರೆ ಸ್ವೀಕರಿಸಿರಲಿಲ್ಲ'
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾತನಾಡಿ, 'ಮೂರು ನಾಲ್ಕು ದಿನದಿಂದ ಕುಟುಂಬಸ್ಥರ ಕರೆ ರಿಸೀವ್ ಮಾಡಿಲ್ಲ. ಸ್ಥಳೀಯರ ನೆರವಿನಿಂದ ಕಿಟಕಿ ಒಡೆದು ನೋಡಿದಾಗ ಮಗು ಸೇರಿ 5 ಮೃತದೇಹಗಳು ಪತ್ತೆಯಾಗಿವೆ. ಕಾರಣ ತನಿಖೆಯ ನಂತರ ಪತ್ತೆಯಾಗಲಿದೆ. ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ನಿತ್ರಾಣವಾಗಿದ್ದ ಮೂರು ವರ್ಷದ ಮಗುವನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ' ಎಂದರು.
ಐದು ದಿನಗಳ ಹಿಂದೆ ಮನೆಬಿಟ್ಟಿದ್ದ ಶಂಕರ್:
ಪತ್ರಿಕೆ ನಡೆಸುತ್ತಿದ್ದ ಹಲ್ಲಗೇರಿ ಶಂಕರ್, ಕುಟುಂಬದ ಜೊತೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಮಗಳು ಸಿಂಧೂರಾಣಿ ಗಂಡನ ಮನೆಗೆ ಹೋಗದ ಬಗ್ಗೆ ಶಂಕರ್ ಅಸಮಾಧಾನಗೊಂಡಿದ್ದರು. ಕಳೆದ ಐದು ದಿನಗಳಿಂದ ಮನೆಗೆ ಬಂದಿರಲಿಲ್ಲ. ನಿನ್ನೆ ಮನೆಗೆ ಬಂದು ವಾಪಸ್ ಹೋಗಿದ್ದರು. ಬೀಗ ಹಾಕಿದ್ದನ್ನು ಗಮನಿಸಿದ ಶಂಕರ್, ಸ್ನೇಹಿತರ ಮನೆಗೆ ಹೋಗಿರಬಹುದೆಂದು ವಾಪಸ್ ಹೋಗಿದ್ದರು. ಇಂದು ಮತ್ತೆ ಮನೆಗೆ ಬಂದು ಬೀಗ ಒಡೆದು ಒಳನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಎಲ್ಲರೂ ಸೀರೆಗಳಲ್ಲಿ ಫ್ಯಾನಿಗೆ ಕಟ್ಟಿ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಎಫ್ಎಸ್ಎಲ್ ತಂಡದಿಂದ ಪರಿಶೀಲನೆ:
ದುರಂತ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.