ಬೆಂಗಳೂರು: ಹಲವು ವರ್ಷಗಳಿಂದ ನಗರದ ಕುಖ್ಯಾತ ರೌಡಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆಂಧ್ರ ಮೂಲದ ನಾಲ್ವರು ಆರೋಪಿಗಳನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿ, 60 ಲಕ್ಷ ರೂಪಾಯಿ ಮೌಲ್ಯದ 200 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಪೋತಯ್ಯ, ಪಲ್ಲೆಂ ವರಪ್ರಸಾದ್, ವಂಥಲಾ ರಮೇಶ್, ಕೊಂಡಜಿ ಪ್ರಸಾದ್ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆಂಧ್ರದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ ನಗರಕ್ಕೆ ತಮ್ಮದೇ ವಾಹನ ಮೂಲಕ ಸರಬರಾಜು ಮಾಡುತ್ತಿದ್ದರು. ಮುಖ್ಯವಾಗಿ ಕುಖ್ಯಾತ ರೌಡಿಗಳಾದ ಉಲ್ಲಾಳ ಕಾರ್ತಿಕ್, ಸನಾವುಲ್ಲಾ, ಕುಳ್ಳು ರಿಜ್ವಾನ್, ಸ್ಟಾರ್ ನವೀನ್ ಸೇರಿದಂತೆ ವಿವಿಧ ರೌಡಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎನ್ನಲಾಗ್ತಿದೆ.
ತಮಗೆ ಬಂದ ಗಾಂಜಾವನ್ನು ವ್ಯವಸ್ಥಿತ ಸಂಪರ್ಕ ಮೂಲಕ ರೌಡಿಗಳಿಗೆ, ನಗರದೆಲ್ಲೆಡೆ ಸರಬರಾಜು ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಫ್ರಿಕಾ ಮೂಲದ ಡ್ರಗ್ಸ್ ಪೆಡ್ಲರ್ ಅಂದರ್:
ಮತ್ತೊಂದು ಪ್ರಕರಣದಲ್ಲಿ ನಗರದ ದಕ್ಷಿಣ ವಿಭಾಗದ ಸಿದ್ದಾಪುರ ಪೊಲೀಸರು ಆಫ್ರಿಕಾ ಖಂಡದ ಐವರಿ ಕೋಸ್ಟಾ ಮೂಲದ ಜಗೂ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈಗಾಗಲೇ ಹೆಣ್ಣೂರು ಸಂಜಯನಗರ, ಸಿದ್ದಾಪುರ ಹಾಗೂ ಜಯನಗರ ಠಾಣೆಗಳಲ್ಲಿ ಹಲವು ಮಾದಕವಸ್ತು ಮಾರಾಟ ಸಂಬಂಧ ಪ್ರಕರಣಗಳಿವೆ. ಡ್ರಗ್ಸ್ ಪೆಡ್ಲರ್ ಜಗೂ ಈ ಹಿಂದೆ ಕೂಡ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ನಂತರವೂ ಮತ್ತೆ ಡ್ರಗ್ಸ್ ಪೆಡ್ಲಿಂಗ್ನಲ್ಲಿ ಆ್ಯಕ್ಟೀವ್ ಆಗಿದ್ದ. ಬಂಧಿತ ಪೆಡ್ಲರ್ ಜಗೂನಿಂದ ಸದ್ಯ 8.50 ಲಕ್ಷ ರೂ. ಮೌಲ್ಯದ ಮಾದಕವಸ್ತು ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 19ರಂದು ತಮಿಳುನಾಡು ಗಡಿ ಬಂದ್ : ವಾಟಾಳ್
ವಾಟ್ಸಾಪ್ ಕಾಲ್ ಮೂಲಕ ಡೀಲ್ ಮಾಡಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಆರೋಪಿ ನಗರದ ಉದ್ಯಮಿಗಳಿಗೆ ಮಾತ್ರ ಕೊಕೇನ್ ಸಪ್ಲೈ ಮಾಡುತ್ತಿದ್ದ. ಎಂ.ಡಿ.ಎಂ.ಎ, ಎಲ್.ಎಸ್.ಡಿ, ಚರಸ್ ಮುಂತಾದ ಸಿಂಥೆಟಿಕ್ ಡ್ರಗ್ಗಳ ಪೈಕಿ ಅತ್ಯಂತ ಕಾಸ್ಟ್ಲಿ ಡ್ರಗ್ಸ್ ಆದ ಕೊಕೇನ್ ಅನ್ನು ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.