ಬೆಂಗಳೂರು : ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯೂಟರ್ನ್ ಡಾಬಾದಲ್ಲಿನ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಬೆಂಕಿ ಹಚ್ಚಲು ಡಾಬಾ ಮಾಲೀಕನ ಪತ್ನಿಯೇ ಆರೋಪಿಗಳಿಗೆ ಸುಪಾರಿ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ದೀಪಕ್, ಸಚಿನ್ ಹಾಗೂ ಅರ್ಪಿತ್ ಎಂಬುವರು ನಗರದ ಹೊರವಲಯದಲ್ಲಿರುವ ಯೂ ಟರ್ನ್ ಡಾಬಾದ ಮಾಲೀಕರಾಗಿದ್ದಾರೆ. ಕಳೆದ ಡಿಸೆಂಬರ್ 24ರ ರಾತ್ರಿ ದುಷ್ಕರ್ಮಿಗಳು ಡಾಬಾಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಪ್ರಶ್ನಿಸಲು ಹೋದ ಮನೋಜ್ ಎಂಬಾತನ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ಮೂವರು ಆರೋಪಿಗಳಾದ ರೌಡಿಶೀಟರ್ ಮನುಕುಮಾರ್ ಸಹಚರರಾದ ಹೇಮಂತ್, ಮಂಜುನಾಥ್ನನ್ನು ಎಂಬುವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕೃತ್ಯಕ್ಕೆ ಸುಪಾರಿ ನೀಡಿದ ಡಾಬಾ ಮಾಲೀಕ ಅರ್ಪಿತ್‌ನ ಪತ್ನಿ ಶೀತಲ್ ಪರಾರಿಯಾಗಿದ್ದಾಳೆ. ಆಕೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಅರ್ಪಿತ್ ಹಾಗೂ ಶೀತಲ್ ಮದುವೆಯಾಗಿತ್ತು. ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಕಾಲ ಕ್ರಮೇಣ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಬೆಳೆದು ನಿತ್ಯ ಜಗಳವಾಗುತಿತ್ತು. ಈ ಹಿನ್ನೆಲೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಹಲವು ದಿನಗಳಾದರೂ ಹೆಂಡ್ತಿ ನೋಡಲು ಹೋಗದೆ ಡಾಬಾ ವ್ಯವಹಾರದಲ್ಲಿ ಅರ್ಪಿತ್ ಮಗ್ನನಾಗಿದ್ದ. ಇದರಿಂದ ಅಸಮಾಧಾನಗೊಂಡು ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಶೀತಲ್, ತನ್ನ ಸ್ನೇಹಿತ ರೌಡಿಶೀಟರ್ ಮನುಕುಮಾರ್ಗೆ ₹20 ಸಾವಿರಕ್ಕೆ ಸುಪಾರಿ ನೀಡಿದ್ದಳು.
ಇದನ್ನೂ ಓದಿ: 'ಎದ್ದೇಳವ್ವ...ಎದ್ದೇಳವ್ವಾ' ಎಂದು ಅತ್ತು ಗೋಗರೆದಳು.. ಕರುಳಬಳ್ಳಿ ಅಗಲಿಕೆಗೆ ತಾಯಿ ಕಣ್ಣೀರಿಟ್ಟಳು ..
ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್ಗೆ ಬುದ್ಧಿ ಬರುತ್ತದೆ ಎಂದು ಶೀತಲ್ ಪ್ಲಾನ್ ಮಾಡಿದ್ದಳು. ಮನು ಪ್ಲಾನ್ನಂತೆ ಸುಪಾರಿ ತೆಗೆದುಕೊಂಡಿದ್ದ. ಈತನ ಸಹಚರರಿಗೆ ಹಣ ಕೊಟ್ಟು ಬೆಂಕಿ ಹಚ್ಚುವ ಸಂಚು ರೂಪಿಸಿದ್ದ. ಇದರಂತೆ ಡಿಸೆಂಬರ್ 24ರಂದು ಮಧ್ಯರಾತ್ರಿ 12ಗಂಟೆಗೆ ಆರೋಪಿಗಳಾದ ಮಂಜುನಾಥ್ ಹಾಗೂ ಹೇಮಂತ್ ಪೆಟ್ರೊಲ್ ಹಾಕಿ ಬೆಂಕಿ ಹಚ್ಚಿದ್ದರು.
ಈ ವೇಳೆ ಸಪ್ಲೈಯರ್ ಆಗಿದ್ದ ಮನೋಜ್ಗೂ ಬೆಂಕಿ ತಗುಲಿ ಸಾವನ್ನಪ್ಪಿದ್ದ. ಈ ಸಂಬಂಧ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದಾರೆ. ಆದರೆ, ಸುಪಾರಿ ಕೊಟ್ಟಿದ್ದ ಶೀತಲ್ ಪರಾರಿಯಾಗಿದಾಳೆ. ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.