ಬೆಂಗಳೂರು: ಬಿಎಂಟಿಸಿ(BMTC) ರಾಜಧಾನಿ ಮಂದಿಯ ಬಹು ಕಾಲದ ನೆಚ್ಚಿನ ಸಾರಿಗೆ ವ್ಯವಸ್ಥೆ. ನಮ್ಮ ಮೆಟ್ರೋದಂತಹ ಫಾಸ್ಟ್ ಸರ್ವೀಸ್ ಬಂದರೂ, ಲಕ್ಷಾಂತರ ಜನರಿಗೆ ಬಿಎಂಟಿಸಿ ಓಡಾಟವೇ ಅಚ್ಚುಮೆಚ್ಚು. ಇಂತಹ ನಗರ ಸಾರಿಗೆ ನಷ್ಟದ ಸುಳಿಯಲ್ಲಿ ಸಿಲುಕಿರುವುದು ದುರಂತ.
ಸಾರಿಗೆ ಸಿಬ್ಬಂದಿಗಳ ಮುಷ್ಕರದ ಬಿಸಿ ಹಾಗು ಕೋವಿಡ್ ಹೊಡೆತದಿಂದಾಗಿ ಸಂಕಷ್ಟ ಎದುರಾಗಿದೆ. ದಿನೇ ದಿನೇ ಅಕ್ಷರಶಃ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಲುಗುತ್ತಿದ್ದು, ಕೋಟ್ಯಂತರ ರೂ. ಸಾಲದಲ್ಲಿ ಸಿಲುಕಿ ಒದ್ದಾಡುತ್ತಿದೆ. ನಷ್ಟದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿ 230 ಕೋಟಿ ರೂ. ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಕಟ್ಟಡವನ್ನು ಬ್ಯಾಂಕ್ನಲ್ಲಿ ಅಡಮಾನಕ್ಕೆ ಇಟ್ಟಿದೆ. ಇದನ್ನ ಖುದ್ದು ಬಿಎಂಟಿಸಿ ಅಧಿಕಾರಿಗಳೇ ಮಾಹಿತಿ ಹಕ್ಕು ಅಡಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲೇ ಅತಿ ಹೆಚ್ಚು ಸಾಲ ಪಡೆದಿದ್ದು, 2019-20- ರಲ್ಲಿ 160 ಕೋಟಿ ಸಾಲ, 2020-21 ರಲ್ಲಿ 230 ಕೋಟಿ ಸಾಲ ಹಾಗು 2019-20-2020-21 ಅವಧಿಯ ಎರಡು ವರ್ಷದಲ್ಲಿ 407.05 ಕೋಟಿ ರೂ. ಸಾಲ ಮಾಡಿದೆ. ಬಿಎಂಟಿಸಿ ಪ್ರಸ್ತುತ 407.05 ಕೋಟಿಗೆ 57.57 ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ.
ಬಿಎಂಟಿಸಿ ಇಂತಹ ಪರಿಸ್ಥಿತಿಗೆ ನಿಜವಾಗಿ ಯಾರು ಕಾರಣ?. ಹಿಂದಿನ ಸಾರಿಗೆ ಸಚಿವರಾ? ಅಥವಾ ಬಿಎಂಟಿಸಿ ಅಧಿಕಾರಿಗಳಾ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಸದ್ಯ ಮುಳುಗುವ ಹಡಗಿನಂತಿರುವ ಬಿಎಂಟಿಸಿಯನ್ನ ಕಾಪಾಡುವ ಹೊಣೆ ಸಚಿವ ಶ್ರೀರಾಮುಲು ಅವರ ಹೆಗಲ ಮೇಲಿದೆ.
ಇದನ್ನೂ ಓದಿ: Missing 2000 crores.. ಬೆಂಗಳೂರಿನಾದ್ಯಂತ ಆಪ್ನಿಂದ ರಸ್ತೆ 'ಗುಂಡಿಗಳ ಪೂಜೆ'