ಬೆಂಗಳೂರು: ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲೂಕು ಕಚೇರಿಗಳಲ್ಲಿ ಏಪ್ರಿಲ್ 1 ರಿಂದ 12 ರವರೆಗೆ ಬಾಕಿ ಇರುವ ಕಡತ ವಿಲೇವಾರಿ ಅಭಿಯಾನ ನಡೆಯಲಿದೆ ಎಂದು ಯಲಹಂಕ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಎರಡು ತಾಲೂಕು ಕಚೇರಿಗಳಲ್ಲಿ ಬಾಕಿ ಇರುವ 94 ಸಿಸಿ, ಪಹಣಿ ಕಾಲಂ 3 ಮತ್ತು ಆಕಾರ್ ಬಂದ್, 1 ವರ್ಷಕ್ಕಿಂತ ಮೇಲ್ಪಟ್ಟ ಪ್ರಕರಣಗಳು ಸೇರಿದಂತೆ ಬಾಕಿ ಇರುವ ಪ್ರಕರಣಗಳನ್ನು ತಡ ಮಾಡದೇ ಇತ್ಯರ್ಥಪಡಿಸುವಂತೆ ವಿಷಯ ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವುದು ಮತ್ತು ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡೂ ತಾಲೂಕು ಕಚೇರಿಗಳು ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳಲ್ಲಿ ಕಡತ ವಿಲೇವಾರಿ ಅಭಿಯಾನವು ಏಪ್ರಿಲ್ 1 ರಿಂದ 12 ರವರೆಗೆ ಬೆಳಗ್ಗೆ 9.30 ರಿಂದ ಸಂಜೆ 6.30 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮಧ್ಯಾಹ್ನ 3 ಗಂಟೆವರೆಗೆ ತಾಲೂಕು ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 3 ಗಂಟೆಯ ನಂತರ ಅವಕಾಶ ಇರುತ್ತದೆ. ಅತಿ ಜರೂರು ಸಂದರ್ಭದಲ್ಲಿ ಮಾತ್ರ ಶಿರಸ್ತೇದಾರ್ ಅವರನ್ನು ಭೇಟಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಸಭೆಯಲ್ಲಿ ಉಪವಿಭಾಗಾಧಿಕಾರಿ ರಂಗನಾಥ್, ಬೆಂಗಳೂರು ಉತ್ತರ ತಹಶೀಲ್ದಾರ್ ಬಾಲಕೃಷ್ಣ, ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ಇಲಾಖೆಯ ಉನ್ನತಾಧಿಕಾರಿಗಳು ಹಾಜರಿದ್ದರು.