ಬೆಂಗಳೂರು: ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ರೆ, ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಉತ್ತರ ಕರ್ನಾಟಕದ ಜನ ನೆರೆ ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಪರಿಸರ ನಾಶವಾಗಲು ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ಉತ್ತಮ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲವನ್ನು ನಾವು ಉಳಿಸಬೇಕಿದೆ. ನಮ್ಮ ಸರ್ಕಾರದಲ್ಲಿ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿತ್ತು. ಈಗಲೂ ಅದೇ ಮುಂದುವರಿಯಬೇಕು ಎಂಬುದು ನಮ್ಮ ಆಶಯ ಹಾಗೂ ಪರಿಸರದ ದೃಷ್ಟಿಯಿಂದಲೂ ಇದು ಸೂಕ್ತ ಎಂದರು.
ಇವತ್ತು ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ ನಾಯಕರು ಹಾಗೂ ನಾವು ಸಭೆ ಮಾಡಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ಅಧ್ಯಕ್ಷರು ಮಾತನಾಡುತ್ತಾರೆ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು.