ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗದಲ್ಲಿ ರಾಜ್ಯ ಸರ್ಕಾರದ ಪ್ರವರ್ಗ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜವನ್ನು ಸೇರ್ಪಡೆಗೊಳಿಸಲು ಒತ್ತಾಯಿಸಿ ಸತ್ಯಾಗ್ರಹ ನಡೆಸಲು ಪಂಚಮಸಾಲಿ ಸಮುದಾಯ ನಿರ್ಧರಿಸಿದೆ.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಧರ್ಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ್ದು, ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡ ಸಮಾಜ. ಕರ್ನಾಟಕ ಜಾತಿ ಪಟ್ಟಿಯಲ್ಲಿ ಪಂಚಮಸಾಲಿ ಸಮುದಾಯದ ಪ್ರಸ್ತಾಪ ಇಲ್ಲ. ಕೃಷಿ ಆಧಾರಿತ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಸಿಗ್ತಿಲ್ಲ. ಸಿಎಂ ಆಗಿದ್ದ ವೀರಪ್ಪ ಮೊಯಿಲಿ ಅವರಿಗೆ ಮೀಸಲಾತಿಗಾಗಿ ಮನವಿ ಸಲ್ಲಿಸಲಾಗಿತ್ತು. ಪಂಚಮಸಾಲಿ ಸಮುದಾಯಕ್ಕೆ ಮೀಸಲು ಸಿಗಬೇಕು ಅಂತ ಮನವಿ ಕೊಡಲಾಗಿತ್ತು. ಪಂಚಮಸಾಲಿ ಸಮಾಜದ 16 ಶಾಸಕರು, 3 ಸಂಸದರಿದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು ಅಂತ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.
![Fasting Satyagraha on October 28 by the Panchamasali community](https://etvbharatimages.akamaized.net/etvbharat/prod-images/kn-bng-02-panchamasali-shree-pressmet-script-7208077_10102020155540_1010f_1602325540_252.jpg)
ಕರ್ನಾಟಕದಲ್ಲಿ ಬಹುಸಂಖ್ಯಾತ ಲಿಂಗಾಯತ ಸಮುದಾಯದಲ್ಲಿ ಅಗ್ರಗಣ್ಯ ಸಮಾಜವಾಗಿರುವ ಪಂಚಮಸಾಲಿ ಸಮಾಜವು ಕೃಷಿಯಾಧಾರಿತ ಹಾಗೂ ಕೂಲಿ ಕಾರ್ಮಿಕರ ಕುಲಕಸುಬನ್ನು ಹೊಂದಿರುವ ಸಮಾಜವಾಗಿದೆ. ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಸಮಾಜವು ತೀವ್ರವಾದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಈ ಕಾರಣಕ್ಕಾಗಿಯೇ ಪಂಚಮಸಾಲಿ ಸಂಘಟನೆಯು 25 ವರ್ಷಗಳ ಹಿಂದೆ ಸ್ಥಾಪನೆಯಾಯಿತು. ಈ ಕಾರಣಕ್ಕಾಗಿ ಸ್ಥಾಪಿತವಾದ ಲಿಂಗಾಯತ ಪಂಚಮಸಾಲಿ ಪೀಠವು ಮೀಸಲಾತಿಗಾಗಿ ಒತ್ತಾಯಿಸಿ 2012 ಡಿಸೆಂಬರ್ ತಿಂಗಳಲ್ಲಿ ಪಾದಯಾತ್ರೆಯ ಮೂಲಕ ಸುವರ್ಣ ವಿಧಾನಸೌಧಕ್ಕೆ ತಮ್ಮ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು.
ಆದರೂ ಇದುವರೆಗೂ ಸರ್ಕಾರದ ಸೌಲಭ್ಯವನ್ನು ಹಾಗೂ ಸವಲತ್ತನ್ನು ಪಡೆಯದೇ ವಂಚಿತಗೊಂಡಿದೆ. ಆದ್ದರಿಂದ ಪ್ರಪ್ರಥಮ ಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅ.28 ರಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಕೊರೊನಾ ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡ್ತೇವೆ ಎಂದು ತಿಳಿಸಿದ್ದಾರೆ.
![Fasting Satyagraha on October 28 by the Panchamasali community](https://etvbharatimages.akamaized.net/etvbharat/prod-images/kn-bng-02-panchamasali-shree-pressmet-script-7208077_10102020155540_1010f_1602325540_485.jpg)
ವಿದ್ಯಾಗಮ ಯೋಜನೆ ಜಾರಿಗೆ ವಿರೋಧ:
ಶಾಲೆ ಆರಂಭ ಮಾಡಲ್ಲ ಅಂತ ಸಿಎಂ ಹೇಳಿದ್ದನ್ನು ಸ್ವಾಗತ ಮಾಡ್ತೇವೆ. ಶಿಕ್ಷಕರು ಮಕ್ಕಳ ಮೂಲಕ ಈ ದೇಶ ಕಟ್ಟುವವರು. ಅವರ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ಪ್ರತ್ಯೇಕ ಪ್ಯಾಕೆಜ್ ನೀಡಬೇಕು. ಸಿಎಂ ಮಾತಿಗೆ ನಾವು ಬದ್ಧವಾಗಿ ಇದ್ದೇವೆ. ಯಡಿಯೂರಪ್ಪನವರ ಮುಖ್ಯಮಂತ್ರಿ ಅವಧಿ ಮುಗಿದ ಬಳಿಕ ಸಿಎಂ ಸ್ಥಾನವನ್ನು ಪಂಚಮಶಾಲಿ ಸಮುದಾಯಕ್ಕೆ ನೀಡಬೇಕು. ಪಂಚಮಶಾಲಿ ಸಮುದಾಯದ ಶೇ. 70ರಷ್ಟು ಜನ ಬಿಜೆಪಿಯನ್ನ ಬೆಂಬಲಿಸಿಕೊಂಡು ಬರ್ತಿದ್ದಾರೆ. ಸಚಿವ ಸ್ಥಾನ ಕೇಳುವುದಕ್ಕಿಂತ ಮುಂದೆ ಸಿಎಂ ಸ್ಥಾನವನ್ನೇ ಕೊಡಲಿ.
ಮಹೇಶ್ ಕುಮಟಹಳ್ಳಿ ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಆಗ ಕೊಡದಿದ್ದು ನಮಗೆ ಅಸಮಾಧಾನ ಇದೆ. ನಮ್ಮ ಸಮುದಾಯದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಮೂವರು ಶಾಸಕರನ್ನಾದ್ರೂ ಸಚಿವರನ್ನಾಗಿ ಮಾಡಬೇಕಿತ್ತು, ಮಾಡಲಿಲ್ಲ. ಆದ್ರೆ ಈಗ ಸಚಿವ ಸ್ಥಾನಕ್ಕಿಂತಲೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂಬ ಹೋರಾಟವೇ ಮುಖ್ಯ. ಯಡಿಯೂರಪ್ಪ ಅವಧಿ ಮೂರು ವರ್ಷ ಇರುತ್ತೋ? ಇಲ್ಲ, ಮುಂದೆಯೂ ಅವರೇ ಆಗ್ತಾರೋ ಗೊತ್ತಿಲ್ಲ. ಅವರ ಅವಧಿ ಮುಗಿದ ಬಳಿಕ ನಮ್ಮ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ಕೊಡಿ ಅಂತ ಒತ್ತಾಯ ಮಾಡ್ತೇವೆ. ನಮ್ಮಲ್ಲೂ ಅನೇಕರು ಅರ್ಹತೆ ಇರೋರು ಇದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ ಎಂದರು.
![Fasting Satyagraha on October 28 by the Panchamasali community](https://etvbharatimages.akamaized.net/etvbharat/prod-images/kn-bng-02-panchamasali-shree-pressmet-script-7208077_10102020153841_1010f_1602324521_983.jpg)