ನೆಲಮಂಗಲ: ಹೆದ್ದಾರಿ ಟೋಲ್ ಫ್ಲಾಜಾಗಳಲ್ಲಿ ಸಂಚರಿಸುವ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೇ ಫಾಸ್ಟ್ ಟ್ಯಾಗ್ ಅಳವಡಿಸಲು ಡಿ.15 ರವರೆಗೆ ಗಡುವು ನೀಡಿತ್ತು.
ನೆಲಮಂಗಲವೂ ಸುಮಾರು 20 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿದ್ದು, ಈ ಹೆದ್ದಾರಿಯಲ್ಲಿರುವ ನವಯುಗ ಟೋಲ್, ಜಾಸ್ ಟೋಲ್ ಮತ್ತು ಲ್ಯಾಂಕೋ ಟೋಲ್ ಫ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಆದ್ರೆ ಫಾಸ್ಟ್ ಟ್ಯಾಗ್ ಸ್ಟಿಕ್ಕರ್‌ಗಳ ಅಭಾವದ ಹಿನ್ನೆಲೆ ಬಹುತೇಕ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಜ.15ರವರೆಗೆ ಅವಧಿಯನ್ನು ವಿಸ್ತರಿಸಿದೆ ಎಂದು ಹೇಳಲಾಗ್ತಿದೆ.
ಆದ್ರೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ನೀಡೋ ಕಾಂಟ್ರಾಕ್ಟ್ ಏಜೆನ್ಸಿಗಳಿಗೆ ಸ್ಟಿಕ್ಕರ್ಗಳನ್ನು ಸಮರ್ಪಕವಾಗಿ ಒದಗಿಸದ ಹಿನ್ನಲೆ ಏಜೆನ್ಸಿಯವರು ತಮ್ಮ ಕಚೇರಿಗೆ ಬೀಗ ಜಡಿದಿದ್ದಾರೆ. ಹೀಗಾಗಿ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪಡೆಯಲು ಬಂದ ವಾಹನ ಸವಾರರಿಗೆ, ಮಾಲೀಕರಿಗೆ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಸಿಗದೆ ಪರದಾಡುವಂತಾಗಿದೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮಾತನಾಡಿ, ಇದೆಲ್ಲ ಕಿರಿ ಕಿರಿ ಯಾಕ್ ಬೇಕಣ್ಣ ನಮಗೆ ಅಂತಾ ಅಸಮಾಧಾನ ಹೊರಹಾಕಿದ್ರು.