ಬೆಂಗಳೂರು: ಲಾಕ್ಡೌನ್ನಿಂದಾಗಿ ಹೂ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದ್ದು, ಮಾರುಕಟ್ಟೆಗೆ ತಂದ ಹೂಗಳು ಮಾರಾಟವಾಗದ ಹಿನ್ನೆಲೆ ರೈತರು ರಸ್ತೆಗೆ ಸುರಿದ ಘಟನೆ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ನಡೆದಿದೆ.
ರೈತರು ತಾವು ಬೆಳೆದ ಹೂಗಳನ್ನು ಕೆ.ಆರ್.ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಮಾರಾಟ ಮಾಡಲು ಸಾಧ್ಯವಾಗದೇ ಹೂಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎಂಟು ತಿಂಗಳ ಕಾಲ ಕಷ್ಟ ಪಟ್ಟು ಬೆಳೆದ ಗುಲಾಬಿ, ಸುಂಗಧರಾಜ ಹೂಗಳನ್ನು ರೈತರು ರಸ್ತೆ ಬದಿಗೆ ಸುರಿಯುತ್ತಿದ್ದಾರೆ.
ನಾಲ್ಕು ಲಕ್ಷ ರೂ. ಖರ್ಚು ಮಾಡಿ ಚೆಂಡು ಹೂ ಬೆಳೆದಿದ್ದೆ. ಈಗ ಯಾರೂ ಕೇಳುವವರಿಲ್ಲ, ವ್ಯಾಪಾರಸ್ಥರು ಕೂಡಾ ಬೇಡ ಅಂತಿದಾರೆ, ಯಾರಾದರೂ ವ್ಯಾಪಾರಿಗಳಿದ್ದರೆ ತಿಳಿಸಿ ಎಂದು ಕೋಲಾರ ಜಿಲ್ಲೆಯ ರೈತನೊಬ್ಬ ಅಳಲು ತೋಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆ.ಆರ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿಎಮ್ ದಿವಾಕರ್, ಹೂವು ಮಾತ್ರ ಜೆಸಿ ರಸ್ತೆಯಲ್ಲಿ ಮಾರಾಟ ಮಾಡಲಾಗ್ತಿತ್ತು. ಆದರೆ, ಈಗ ಅದಕ್ಕೂ ಅವಕಾಶ ಕೊಡ್ತಿಲ್ಲ. ಹೂವುಗಳು ಒಂದೇ ದಿನಕ್ಕೆ ಹಾಳಾಗುತ್ತವೆ. ವ್ಯಾಪಾರ ಆಗದ ಕಾರಣ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ವ್ಯಾಪಾರ ವಹಿವಾಟು ನಡೆಸಲು ಹತ್ತಿರದ ಮೈದಾನವೊಂದರಲ್ಲಿ ಅವಕಾಶ ಕೊಡಿ ಅಂದ್ರೂ ಕೊಡುತ್ತಿಲ್ಲ. ಮದ್ಯ ಮಾರಾಟಕ್ಕೆ ಅವಕಾಶ ಕೊಡುವ ಸರ್ಕಾರ ರೈತರಿಗೇಕೆ ಲಾಕ್ ಡೌನ್‌ಮಾಡಿದೆ ಎಂದರು.
ಇನ್ನು ಕೆ.ಆರ್ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಒಟ್ಟು 300 ಹೂವಿನ ಅಂಗಡಿ ಅಂಗಡಿಗಳಿದ್ದು, ವಿವಿಧ ವ್ಯಾಪಾರಗಳ 2,200 ಅಂಗಡಿಗಳಿವೆ. 1,200 ಬೀದಿ ಬದಿ ವ್ಯಾಪಾರಿಗಳಿದ್ದಾರೆ, ಸದ್ಯ ಲಾಕ್ಡೌನ್ ಎಲ್ಲರನ್ನು ನಷ್ಟಕ್ಕೆ ಸಿಲುಕಿಸಿದೆ.
ರಸ್ತೆಗೆ ಮಲ್ಲಿಗೆ ಹೂ ಸುರಿದ ಶಿವಮೊಗ್ಗ ರೈತ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಯಡವಾಲದ ರೈತ ಶ್ರೀನಿವಾಸ್ ಅವರು ಹೂ ಮಾರಾಟ ಮಾಡಲು ಇಂದು ಬೆಳಗ್ಗೆ ಸುಮಾರು 70 ಕಿ.ಮಿ ಬೈಕ್ ನಿಂದ ಬೈಕ್ನಲ್ಲಿ ಬಂದಿದ್ದರು. ಆದರೆ, ಲಾಕ್ಡೌನ್ ಹಿನ್ನೆಲೆ ನಗರದ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ಕೋಪಗೊಂಡ ರೈತ ಹೂವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲು ಎಕರೆ ಜಮೀನಿನಲ್ಲಿ ಮಲ್ಲಿಗೆ ಹೂವನ್ನು ಬೆಳೆದಿದ್ದ ರೈತರನ ಪರಿಶ್ರಮ ಲಾಕ್ಡೌನ್ ಹಿನ್ನೆಲೆ ಮಣ್ಣು ಪಾಲಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಬೇಕಿದೆ.