ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಳಂಬ ಹಿನ್ನಲೆ ಉತ್ತರ ಕರ್ನಾಟಕದಿಂದ ಬಂದ ನೂರಾರು ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದಾರೆ.
ಕಾಲ್ನಡಿಗೆ ಜಾಥಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬಂದಿರುವ ರೈತರಿಗೆ ಇನ್ನೂ ರಾಜ್ಯಪಾಲರ ಭೇಟಿಯ ಅನುಮತಿ ಸಿಗದಿರುವ ಹಿನ್ನಲೆ ರೈಲ್ವೆ ನಿಲ್ದಾಣದಲ್ಲೇ ಕುಳಿತು ಮಳೆ ಬಂದರೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಆದ್ರೆ ಅಧಿಕಾರಿಗಳು ಇಂದು ರಾಜ್ಯಪಾಲರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಭೇಟಿಯಾಗದೆ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾತನಾಡಿದ ರೈತ ಮುಖಂಡ ವೀರೇಶ್, ಮೂರು ಪಕ್ಷದ ನಾಯಕರು ನೀರು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ನ್ಯಾಯಾಧಿಕರಣದ ತೀರ್ಪಿನ ಪ್ರಕಾರ 13 ಟಿಎಂಸಿ ನೀರು ಕೊಡಲಾಗಿದೆ. ನ್ಯಾಯಾಧಿಕರಣ ಕೊಟ್ಟ ನೀರನ್ನು ಬಳಕೆ ಮಾಡಿಕೊಳ್ಳಲ್ಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ವಿಳಂಬ ನೀತಿ ತೋರುತ್ತಿದ್ದು, ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ. ಈ ಹಿನ್ನೆಲೆ ಇಂದು ನಾವು ರಾಜ್ಯಪಾಲರನ್ನು ಭೇಟಿ ಮಾಡ್ತಿದ್ದೇವೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ನಮಗೆ ನಮ್ಮ ನೀರನ್ನು ಕೊಡಿಸಬೇಕು ಎಂದರು.
ಇನ್ನೂ ಧರಣಿ ವೇಳೆ ಅಸ್ವಸ್ಥರಾದ ನರಗುಂದದ ರೈತರೊಬ್ಬರನ್ನು ಹೊಯ್ಸಳ ವಾಹನದ ಮೂಲಕ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ರೈತರೊಂದಿಗೆ ಪೊಲೀಸರು ಮಾತುಕತೆ ನಡೆಸಿ ಪ್ರತಿಭಟನೆ ಕೈಬಿಡುವಂತೆ ತಾಕೀತು ಮಾಡಿದರು. ಆದ್ರೆ ರಾಜ್ಯಪಾಲರನ್ನ ಭೇಟಿಯಾಗುವ ವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ರೈತರು ಪಟ್ಟುಹಿಡಿದಿದ್ದಾರೆ.