ದೊಡ್ಡಬಳ್ಳಾಪುರ: ಸ್ವಂತ ಭೂಮಿ ಹೊಂದಲು ಕಳೆದ ಕೆಲವು ವರ್ಷಗಳಿಂದ 40 ಪರಿಶಿಷ್ಟ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರಿ ಜಾಗವನ್ನು ಕಬಳಿಸಲು ವ್ಯಕ್ತಿಯೋರ್ವ ಸಂಚು ರೂಪಿಸಿದ್ದಾನೆ ಎನ್ನಲಾಗಿದ್ದು, ಗುಡಿಸಲುಗಳಿಗೆ ರಾತ್ರೋರಾತ್ರಿ ಬೆಂಕಿಯಿಟ್ಟು ಜನರನ್ನು ಒಕ್ಕಲೆಬ್ಬಿಸಲು ಯತ್ನಿಸಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಕನಕೇನಹಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿ 3 ಎಕರೆ 20 ಗುಂಟೆ ಶಾನುಭೋಗ ಇನಾಮ್ತಿ ಸರ್ಕಾರಿ ಜಾಗವಿದೆ. ಈ ಜಾಗದಲ್ಲಿ ಸುಮಾರು 40 ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ನಿವೇಶನಕ್ಕಾಗಿ ಹೋರಾಟ ಮಾಡುತ್ತಿವೆ. ಈ ನಡುವೆ ಜಾಗವನ್ನು ಕಬಳಿಸಲು ಗ್ರಾಮದ ಮುತ್ತು ರಾಜೇಗೌಡ ಪ್ರಯತ್ನಿಸಿರುವುದಾಗಿ ಹೇಳಲಾಗಿದೆ. ಇಲ್ಲಿಂದ ಜನರನ್ನು ಹೇಗಾದರೂ ಮಾಡಿ ಒಕ್ಕಲೆಬ್ಬಿಸಬೇಕೆಂದು ಸಂಚು ರೂಪಿಸಿದ ಆರೋಪ ಹೊತ್ತಿರುವ ಮುತ್ತುರಾಜೇಗೌಡ ಮತ್ತು ಮಧು ಎಂಬುವರು ಕಳೆದ ರಾತ್ರಿ ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಶಾನುಭೋಗ ಇನಾಮ್ತಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಗುಡಿಸಲು ವಾಸಿಗಳು ಮುತ್ತುರಾಜೇಗೌಡ ನಡುವೆ ವ್ಯಾಜ್ಯ ಇದ್ದು, ಈಗಾಗಲೇ ಡಿ.ಸಿ ಮತ್ತು ಎ.ಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಕುಟುಂಬಗಳ ಪರವಾಗಿ ಆದೇಶ ಬಂದಿದೆ. ಆದರೆ ಇದನ್ನು ಪ್ರಶ್ನಿಸಿ ಮುತ್ತುರಾಜೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ ನಡುವೆಯೂ ದುಷ್ಕರ್ಮಿಗಳು ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ: ಮುಂದಿನ 4 ದಿನ ರಾಜ್ಯಾದ್ಯಂತ ವರುಣಾರ್ಭಟ: ದಕ್ಷಿಣ ಒಳನಾಡಿನಲ್ಲಿಂದು ಹೆಚ್ಚು ಮಳೆ