ಬೆಂಗಳೂರು: ಅಮಾಯಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಆರೋಪ ಸಂಬಂಧ ಆರ್ಎಂಸಿ ಯಾರ್ಡ್ ಠಾಣೆಯ ಮಹಿಳಾ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಸಬ್ ಇನ್ಸ್ಪೆಕ್ಟರ್ ಆಂಜಿನಪ್ಪ ಹಾಗೂ ಕಾನ್ಸ್ಟೇಬಲ್ ಉಮೇಶ್ ಅಮಾನತುಗೊಂಡವರು. ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಹಾಗೂ ಸ್ನೇಹಿತ ನಾಗೇಂದ್ರ ಅವರನ್ನು ಜು.14 ರಂದು ಇನ್ಸ್ಪೆಕ್ಟರ್ ಪಾರ್ವತಮ್ಮ, ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಉಮೇಶ್ ಮುಖಾಂತರ ಕರೆಯಿಸಿಕೊಂಡಿದ್ದರು. ಪಿಎಸ್ಐ ಆಂಜಿನಪ್ಪ ವಿಚಾರಣೆ ವೇಳೆ ಶಿವರಾಜ್ಗೆ ಸಿಗರೇಟಿನಲ್ಲಿ ಗಾಂಜಾ ಸೇವಿಸುವಂತೆ ಒತ್ತಡ ಹಾಕಿದ್ದರು. ಸಿಗರೇಟು ಸೇದಿದರೆ ಬಿಡುವುದಾಗಿ ಆಮಿಷವೊಡ್ಡಿ ಸೇದಿಸಿದ್ದರು. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಮಾದಕ ವಸ್ತು ಸೇವನೆ ಆರೋಪ ಹೊರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್, ಪೊಲೀಸರ ನಡತೆಯಿಂದ ಬೇಸರಗೊಂಡು ಸಮಾಜಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದರು. ಆದ್ರೆ ಕೂಡಲೇ ಮನೆಯವರು ಆಸ್ಪತ್ರೆ ಸೇರಿಸಿದ್ದರಿಂದ ಶಿವರಾಜ್ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್, ನಡೆದ ಘಟನೆಗಳ ಬಗ್ಗೆ ಮಾತನಾಡಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಟುಂಬಸ್ಥರು, ಮನೆ ಮುಂದೆ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದವನನ್ನು ಕರೆದುಕೊಂಡು ಹೋಗಿ ಗಾಂಜಾ ಸೇವನೆ ಆರೋಪದಡಿ ಸುಳ್ಳು ಕೇಸ್ ಹಾಕಿದ್ದಾರೆ. ಬಲವಂತವಾಗಿ ಸಿಗರೇಟಿನಲ್ಲಿ ಗಾಂಜಾ ಸೇರಿಸಿ ಸೇದುವಂತೆ ಒತ್ತಡ ಹಾಕಿದ್ದಾರೆ ಎಂದು ಅರೋಪಿಸಿದ್ದರು.
(ಜೈಲಿನಿಂದಲೇ ಸ್ಕೆಚ್ ಹಾಕೋ ಕ್ರಿಮಿನಲ್ಸ್... ಹೆಡೆಮುರಿ ಕಟ್ಟಲು ಕಮಲ್ಪಂತ್ ಮಾಸ್ಟರ್ ಪ್ಲ್ಯಾನ್!)