ಬೆಂಗಳೂರು : ಸರ್ಕಾರಿ ಆಸ್ಪತ್ರೆ ಅಂದರೆ ಹಲವರಿಗೆ ಅದುವೇ ಜೀವರಕ್ಷಕ. ಇನ್ನು ಕೆಲವರಿಗೆ ಅಪರೂಪ. ಆದರೆ, ಕೊರೊನಾ ಕಾಲಿಟ್ಟಿದ್ದೇ ತಡ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ, ಸ್ವಚ್ಛತೆ, ಸಿಬ್ಬಂದಿ ನಿಯೋಜನೆ ಹೀಗೆ ಬೇಕಾದ ಮೂಲಸೌಕರ್ಯಗಳೆಲ್ಲದರಲ್ಲೂ ಬದಲಾವಣೆ ತರಿಸಿತು. ಹಲವು ವರ್ಷಗಳಿಂದ ಸಿಗದೇ ಇದ್ದ ಸೌಲಭ್ಯಗಳು ಸಿಕ್ಕಿದ್ದು ಸುಳ್ಳಲ್ಲ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆ, ಸ್ಪೆಷಾಲಿಟಿ ಆಸ್ಪತ್ರೆಗಳು ಬದಲಾದವು. ಅದಕ್ಕೆ ಕಾರಣ ಕೋವಿಡ್. ಕೋವಿಡ್ ಸಮಯದಲ್ಲಿ ಆರೋಗ್ಯ ಕೇಂದ್ರಗಳು ಗಂಭೀರ ಸವಾಲು ಎದುರಿಸಬೇಕಾಯಿತು. ವೆಂಟಿಲೇಟರ್, ಐಸಿಯು ಬೆಡ್ ಸಮಸ್ಯೆ, ಸಿಬ್ಬಂದಿ ಕೊರತೆ, ಉಪಕರಣಗಳು ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳು ಎದುರಾದವು. ನಗರದ ಹಲವು ಆಸ್ಪತ್ರೆಗಳಲ್ಲಿ ಐಸಿಯು ಸಿಗದೇ ಸೋಂಕಿತರು ಸಮಸ್ಯೆ ಅನುಭವಿಸಿದ್ದು, ಗೊತ್ತೇ ಇದೆ.
ಕೊರೊನಾದಿಂದ ನಗರದ ಹಲವು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳ ಸೌಲಭ್ಯ ದೊರೆಯಿತು. ಕೆ ಸಿ ಜನರಲ್ ಆಸ್ಪತ್ರೆಗೆ 300 ಹಾಸಿಗೆ, ಜಯನಗರ ಜನರಲ್ ಆಸ್ಪತ್ರೆಗೆ 300, ವಿಕ್ಟೋರಿಯಾ ಆಸ್ಪತ್ರೆಗೆ 550, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ 1040, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ 440 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.
ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನೂತನವಾಗಿ ತುರ್ತು ನಿಗಾ ಘಟಕ (ಐಸಿಯು) ನಿರ್ಮಿಸಲಾಗಿದೆ. ಆದರೆ, ಉದ್ಘಾಟನೆ ಬಾಕಿ ಇದ್ದು, 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೆ 50 ಹಾಸಿಗೆಗಳನ್ನು ನೀಡಲಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ.
ನಗರದ ಪ್ರತಿಷ್ಠಿತ ಹೆರಿಗೆ ಆಸ್ಪತ್ರೆ ವಾಣಿವಿಲಾಸದಲ್ಲೂ ಹೆಚ್ಚುವರಿ ವೆಂಟಿಲೇಟರ್, ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಆರ್ಎಂಒ ಸಂತೋಷ್ ಮಾಹಿತಿ ನೀಡಿದ್ದಾರೆ. ಲ್ಯಾಬ್ ಟೆಕ್ನಿಷಿಯನ್, ಇತರೆ ಡಿ ಗ್ರೂಪ್ ನೌಕರರ ಕೊರತೆ ಇತ್ತು. ಇದೀಗ ಭರ್ತಿ ಮಾಡಲಾಗಿದೆ. ಕೊರೊನಾ ನೆಪದಿಂದ ಹಲವು ಮೂಲ ಸೌಕರ್ಯಗಳನ್ನ ಒದಗಿಸಲಾಯಿತು ಎಂದರು.
ಜೊತೆಗೆ ನಿಯಂತ್ರಣ ಮೀರಿ ಕೊರೊನಾ ಏರುತ್ತಿದ್ದ ಪರಿಣಾಮ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಣಿಸಿತು. ಆಗ ವಯೋನಿವೃತ್ತಿ ಹೊಂದುವ ಸಿಬ್ಬಂದಿಯ ಅವಧಿ ವಿಸ್ತರಣೆ ಮಾಡಲಾಗಿತ್ತು. ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆ 3ನೇ ಬಾರಿ ವಯೋನಿವೃತ್ತಿ ಅವಧಿ ವಿಸ್ತರಣೆ ಮಾಡಲಾಗಿತ್ತು.
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆ ಇರುವವರ ಅವಧಿ ಡಿ.31ರವರೆಗೆ ವಿಸ್ತರಿಸಲಾಗಿದೆ. ಕೊರೊನಾ ನೆಪದಿಂದಾದರೂ ಆರೋಗ್ಯ ಕೇಂದ್ರಗಳು ಸುಧಾರಣೆ ಕಂಡಿರುವುದು ನೂರಕ್ಕೆ ನೂರು ಸತ್ಯ.