ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನಕ್ಕೆ ಹೆಚ್ಚುವರಿ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಸಚಿವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಳ್ಳುವ ತೀರಾ ಹಿಂದುಳಿದಿರುವ ಹಳ್ಳಿ, ಗ್ರಾಮಗಳಲ್ಲಿನ ಮೂಲ ಸೌಕರ್ಯಗಳಾದ ರಸ್ತೆ ಸಾರಿಗೆ, ಕುಡಿಯುವ ನೀರು, ಆರೋಗ್ಯ ಕೇಂದ್ರಗಳು, ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ಶಾಲಾ ಮತ್ತು ಅಂಗನವಾಡಿ ದುರಸ್ತಿ, ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ 2022-23 ನೇ ಸಾಲಿನ ಆಯವ್ಯಯದಲ್ಲಿ 15 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.
ಈ ಮೊತ್ತದಿಂದ ತಲಾ ಒಂದು ಕೋಟಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ಅನುಷ್ಠಾನದ ವೆಚ್ಚಗಳಿಗೆ ಪಾವತಿಸಲು ಅನುಮತಿ ನೀಡಲಾಗಿದೆ. 2021-22 ಸಾಲಿನಲ್ಲಿ, ಕಂದಾಯ ಸಚಿವರು ಈ ಹಿಂದೆ ಭಾಗವಹಿಸಿರುವ ಗ್ರಾಮಗಳಾದ ಯಾದಗಿರಿ ಜಿಲ್ಲೆ ದೇವತ್ಕಲ್ ಗ್ರಾಮ, ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮ, ಉತ್ತರ ಕನ್ನಡ ಜಿಲ್ಲೆಯ ಕುಂಟಕಣಿ ಗ್ರಾಮಕ್ಕೆ ತಲಾ ಒಂದು ಕೋಟಿಯಂತೆ ಒಟ್ಟು 3 ಕೋಟಿ ರೂ. ಬಿಡುಗಡೆ ಮಾಡಲು ಅನಮೋದನೆ ನೀಡಲಾಗಿದೆ.
2022-23ನೇ ವರ್ಷದಲ್ಲಿ ಅನುದಾನವನ್ನು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ಸಂದರ್ಭದಲ್ಲಿ ಪ್ರತಿ ತಿಂಗಳು ಮಾತ್ರ ಕಂದಾಯ ಸಚಿವರು ಆಯ್ಕೆ ಮಾಡಿರುವ ಹಳ್ಳಿ/ಗ್ರಾಮದಲ್ಲಿ ಮೂಲ ಸೌಕರ್ಯಕ್ಕಾಗಿ ಜನರ ಬೇಡಿಕೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ, ಜಿಲ್ಲಾಧಿಕಾರಿಗಳು ಕಾಮಗಾರಿಗಳನ್ನು ಆಯ್ಕೆ ಮಾಡಿ ಒಂದು ಕೋಟಿ ಮೀರದ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರದ ಸಂಸ್ಥೆಗಳಿಂದ ಕೆ.ಟಿ.ಪಿ.ಪಿ ನಿಯಮಗಳನ್ವಯ ಅನುಷ್ಠಾನಗೊಳಿಸಬೇಕು.
ಕಾಮಗಾರಿಗಳು ಖಾಯಂ ಸ್ವರೂಪದ್ದಾಗಿರಬೇಕು. ಪ್ರತಿ ತಿಂಗಳು ಒಬ್ಬ ಜಿಲ್ಲಾಧಿಕಾರಿಗೆ ಒಂದು ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ತೆರಳಿದ ಸರ್ಕಾರ: ಸಮಸ್ಯೆ ಮುಂದಿಟ್ಟು ಒಂದಿಷ್ಟು ಪರಿಹಾರ ಪಡೆದ ಸ್ಥಳೀಯರು