ಬೆಂಗಳೂರು: ರಾಜಕಾರಣದಲ್ಲಿ ಎಲ್ಲರೂ ಕೂಡ ಆಸೆ ಇಟ್ಟುಕೊಂಡೆ ಬರುತ್ತಾರೆ, ಅದೇ ರೀತಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಚಿಕ್ಕನಾಯಕನ ಹಳ್ಳಿ ಕ್ಷೇತ್ರದ ಶಾಸಕ ಮಾಧುಸ್ವಾಮಿ ಆಕಾಂಕ್ಷೆ ವ್ಯಕ್ತಪಡಿಸಿದರು.
ವಿಧಾನಸೌಧ ಪ್ರವೇಶಿಸುವ ಮುನ್ನ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಗಿನ ಪ್ರಶ್ನೆಗೆ ಉತ್ತರಿಸಿ, ರಾಜಕಾರಣದಲ್ಲಿ ಎಲ್ಲರೂ ಆಸೆ ಇಟ್ಟುಕೊಂಡೇ ಬರುತ್ತಾರೆ. ಹಾಗೆಯೇ ನಾನೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೇನೆ. ಆದರೆ ಮಂತ್ರಿ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪರ್ವ ಇರಲಿದೆ. ರಾಜಕಾರಣ ಎಂದಿಗೂ ಹೂವಿನ ಹಾಸಿಗೆಯಾಗಿ ಇರುವುದಿಲ್ಲ. ಹಲವು ಸವಾಲುಗಳ ಮಧ್ಯೆಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಸಂತಸವಾಗಿದೆ. ಸೋಮವಾರ ಸದನದಲ್ಲಿ ಬಹುಮತ ಸಾಬೀತು ಮಾಡುತ್ತೇವೆ. ಹದಿನೈದು ಶಾಸಕರು ನಮ್ಮ ಪಕ್ಷಕ್ಕೆ ಬೆಂಬಲಿಸಿದ್ದಾರೆ. ನಮಗೆ ಯಾವುದೇ ರೀತಿಯಿಂದಲೂ ಹಿನ್ನಡೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.