ಬೆಂಗಳೂರು: ರಾಜ್ಯದಲ್ಲಿ ಖಾತೆ ಹಂಚಿಕೆ ಆಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮಂತ್ರಿಮಂಡಲ ರಚನೆಗೂ ಸಮಯ ತೆಗೆದುಕೊಂಡರು. ಈಗ ಖಾತೆ ಹಂಚಿಕೆಗೂ ಅದನ್ನೇ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಕೈಲಾಗುವುದಿಲ್ಲ ಎಂದರೆ ಹೇಗೆ? ಅದಕ್ಕೂ ದೆಹಲಿಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರದಲ್ಲಿ ಎಲ್ಲವೂ ಸ್ಥಗಿತವಾಗಿದೆ. ನಿಜವಾಗಲೂ ಈ ಸರ್ಕಾರ ಟೇಕ್ ಆಫ್ ಅಲ್ಲ. ಇಂಜಿನ್ಗೆ ಕೀ ಹಾಕಿ ಆನ್ ಮಾಡುವುದಕ್ಕೇ ಹೋಗಿಲ್ಲ ಎಂದು ಲೇವಡಿ ಮಾಡಿದರು.
ಆರ್ಥಿಕ ವ್ಯವಸ್ಥೆ ಪ್ರಗತಿಯಲ್ಲಿದ್ದ ವೇಳೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಜಾರಿಗೆ ಮತ್ತು ಅವೈಜ್ಞಾನಿಕ ನೀತಿಗಳಿಂದ ಅದು ದಾರಿ ತಪ್ಪಿತು. ಈಗ ಬಿಗಡಾಯಿಸಿರುವ ಅರ್ಥ ವ್ಯವಸ್ಥೆ ಬಗ್ಗೆ ಯೋಚಿಸಬೇಕೇ ವಿನಃ, ಹಿಂದೆ ಏನಾಯಿತು, ಅವರು ಏನು ಮಾಡಿದರು ಎಂದು ಸಮಯ ವ್ಯರ್ಥ ಮಾಡಬಾರದು. ಆರ್ಥಿಕ ನೀತಿಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಆರ್ಥಿಕತೆ ಸಂಪೂರ್ಣ ಹಾಳಾಗಿದೆ ಎಂದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ನೆಹರೂ ಕಾರಣರಾಗಿದ್ದಾರೆ. ನೆಹರೂ ಇರಲಿಲ್ಲ ಅಂದಿದ್ದರೆ, ಜಮ್ಮು ಕಾಶ್ಮೀರ ಭಾರತದ ಅಂಗವಾಗುತ್ತಿರಲಿಲ್ಲ. ಜನರನ್ನು ಮೆಚ್ಚಿಸಲು ಟೀಕೆ ಮಾಡೋರು ಇತಿಹಾಸ ಅರ್ಥ ಮಾಡಬೇಕು. ಅವರಿಗೆ ದೇಶದ ಹಿತಕ್ಕಿಂತ ತಮ್ಮರಾಜಕೀಯ ಬೇಳೆ ಬೇಯಿಸುವುದು ಮುಖ್ಯವಾಗಿದೆ ಎಂದು ಕಿಡಿ ಕಾರಿದರು.