ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದ ತನಿಖೆ ಸಿಐಡಿ ಮಾಡುತ್ತಿದ್ದು, ತನಿಖೆ ಮುಗಿದ ಕೂಡಲೇ ಪರೀಕ್ಷೆ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆದಷ್ಟು ಬೇಗ ಪಿಎಸ್ಐ ಪ್ರಕರಣದ ವರದಿ ಬರುತ್ತದೆ. ಇನ್ನು ಅನೇಕರು ಬಂಧನ ಆಗುತ್ತಿದ್ದಾರೆ. ಹೀಗಾಗಿ ತನಿಖೆ ಮುಗಿದ ಬಳಿಕ ಪರೀಕ್ಷೆ ಮಾಡುತ್ತೇವೆ. ವಯಸ್ಸಿನ ಮಿತಿ ಬಗ್ಗೆ ಯಾರಿಗೂ ಭೀತಿ ಬೇಡ ಎಂದು ಆಶ್ವಾಸನೆ ನೀಡಿದರು.
ನಾನು ಗೃಹ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಇಂದಿಗೆ ಒಂದು ವರ್ಷ ಆಯ್ತು. ನಾನು ಗೃಹ ಇಲಾಖೆಯನ್ನು ಚೆನ್ನಾಗಿ ನಿಭಾಯಿಸಿದ್ದೇನೆ ಎಂದು ಅಂದುಕೊಂಡಿದ್ದೇನೆ. ಫಾಜಿಲ್ ಹತ್ಯೆ ತನಿಖೆ ಮುಗಿಯುವ ಹಂತಕ್ಕೆ ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ತನಿಖೆಯಾಗುತ್ತಿದೆ. ಎರಡು ಹತ್ಯೆಗಳ ಆರೋಪಿಗಳು ಯಾರು ಎಂಬುದು ಗೊತ್ತಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಎರಡು-ಮೂರು ದಿನಗಳಲ್ಲಿ ಆರೋಪಿಗಳ ಬಂಧನ ಮಾಡಲಾಗುತ್ತದೆ. ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರನ್ನು ಹಿಡಿಯುವ ಕೆಲಸ ಆಗುತ್ತಿದೆ ಎಂದರು.
ಒಂದು ಕಡೆ ಅವರು ನಿಂತಿಲ್ಲ. ಬೇರೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದಾರೆ. ನಮ್ಮ ಪೊಲೀಸರು ಅವರ ಬೆನ್ನು ಹತ್ತಿದ್ದಾರೆ. ಆದಷ್ಟು ಬೇಗ ಅವರ ಬಂಧನವೂ ಆಗಲಿದೆ. ಇನ್ನು ಫಾಜಿಲ್ ಕೇಸ್ನಲ್ಲೂ ಹತ್ಯೆ ಯಾರು ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರನ್ನು ಹಿಡಿಯುವ ಕೆಲಸ ಆಗುತ್ತಿದೆ. ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದೇನೆ. ಮಂಗಳೂರು ಹತ್ಯೆ ಪ್ರಕರಣದ ಬಗ್ಗೆ ಸುದೀರ್ಘ ಮಾಹಿತಿ ಪಡೆದುಕೊಂಡರು. ಮಾಧ್ಯಮಗಳಿಗೆ ಎಲ್ಲವನ್ನೂ ಹೇಳಲಿಕ್ಕೆ ಆಗಲ್ಲ. ಸರ್ಕಾರದ ಕಾರ್ಯವೈಖರಿಗೆ ಬಗ್ಗೆ ಅಮಿತ್ ಶಾ ಅವರಿಗೆ ತೃಪ್ತಿ ಇದೆ ಎಂದರು.
ಸಿಎಂ ಬದಲಾವಣೆ ಇಲ್ಲ: ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾ ಪೋಹ ಅಷ್ಟೇ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಮಿತ್ ಶಾ ಅವರ ಗಮನಕ್ಕೆ ಬಂದಿದೆ ಎಂದ ಗೃಹ ಸಚಿವರು, ಯಾವುದೇ ಫೈಲ್ ವಿಳಂಬ ಆಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಅನೇಕ ಕೆಲಸ ಇರುತ್ತದೆ. ಹಗಲಿರುಳು ಸಿಎಂ ಕೆಲಸ ಮಾಡುತ್ತಿದ್ದಾರೆ. ಕೆಲಸದ ಒತ್ತಡವೂ ಇದೆ. ಅನೇಕ ಸಮಯದಲ್ಲಿ ಮಧ್ಯರಾತ್ರಿ ಸಿಎಂ ಬಂದಿದ್ದಾರೆ. ಫೈಲ್ಗೆ ಸಹಿ ಹಾಕುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಆದ್ಯತೆ ಮೇರೆಗೆ ಫೈಲ್ ನೋಡ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಎಲ್ಲ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಇದೆ. 1,350 ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಹೊಸದಾಗಿ ನೇಮಕ ಮಾಡಲಾಗಿದೆ. ಬೃಹತ್ ಕಟ್ಟಡಗಳಲ್ಲಿ ಅಗ್ನಿ ಅವಘಡಗಳಾದಾಗ ಜನರ ಪ್ರಾಣ ರಕ್ಷಣೆಗೆ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಫಿನ್ ಲ್ಯಾಂಡ್ ಲ್ಯಾಡರ್ ಮಿಷನ್ ತರಿಸಲಾಗುತ್ತಿದೆ. ಅದು ಶೀಘ್ರವೇ ಬೆಂಗಳೂರಿಗೆ ಬರಲಿದೆ ಎಂದು ತಿಳಿಸಿದರು.