ಬೆಂಗಳೂರು: ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವವರಿಗೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಸಿಎಂ ಬಿಎಸ್ವೈಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವವರು ಸೇರಿದಂತೆ ಶ್ರಮಿಕ ವರ್ಗದ ಸಂಘಟನೆಗಳ ಮುಖಂಡರೊಂದಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ನಡೆದ ಚರ್ಚೆ ಆಧರಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಶ್ರಮಿಕ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಸುದೀರ್ಘ ಪತ್ರದಲ್ಲಿ ''ಕೊರೊನಾ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಹೇರಿಕೆಯಾಗಿ ಒಂದೂವರೆ ತಿಂಗಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರು, ಕಾರ್ಮಿಕರ ಬದುಕು, ವೈದ್ಯಕೀಯ ಸಮಸ್ಯೆಗಳ ಕುರಿತು ಏಪ್ರಿಲ್ 19ರಂದು ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒತ್ತಾಯಗಳಿರುವ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆ ಎರಡು ವಾರಗಳಿಂದ ಪರಿಸ್ಥಿತಿ ಬಹಳ ಸುಧಾರಿಸಿರುವಂತೆ ಕಂಡುಬರುತ್ತಿಲ್ಲ'' ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೊತೆಗೆ ''ಏಪ್ರಿಲ್ 28ರಂದು ರಾಜ್ಯದ ಕುಶಲಕರ್ಮಿ ಸಮುದಾಯಗಳು, ಸ್ವಯಂ ಉದ್ಯೋಗಿಗಳು, ಬೀದಿ ಬದಿ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳ ಮುಖಂಡರ ಸಭೆ ನಡೆಸಿದ್ದು ಎಲ್ಲಾ ಮುಖಂಡರೂ ತಮ್ಮ ಸಮುದಾಯಗಳು ಎದುರಿಸುತ್ತಿರುವ ಸಂಕಷ್ಟಗಳ ಭೀಕರತೆಯನ್ನು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಪ್ರಕಾರ ದುಡಿಯುವ ಸಮುದಾಯಗಳ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ದುಸ್ಥಿತಿ ಬಂದಿದೆ'' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
''ನಮ್ಮ ಆರ್ಥಿಕತೆಯನ್ನು ಉತ್ಪಾದನಾ ಸಮಯ ಮತ್ತು ವೆಚ್ಚ ಮಾಡುವ ಸಮಯ ಎಂದು ಗುರುತಿಸಬಹುದು. ಡಿಸೆಂಬರ್ ನಂತರದ ಅವಧಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಉತ್ಪಾದನೆ ಮತ್ತು ವೆಚ್ಚ ಮಾಡುವ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ನೋಟ್ ಬ್ಯಾನ್ ಮತ್ತು ಜಿಎಸ್ಟಿಯ ಅತಾರ್ಕಿಕ, ಅವಾಸ್ತವಿಕ ಕ್ರಮಗಳಿಂದಾಗಿ ಎಲ್ಲಾ ಉತ್ಪಾದಕ ಮತ್ತು ಕುಶಲಕರ್ಮಿ ಸಮುದಾಯಗಳ ಆರ್ಥಿಕತೆ ದಯನೀಯ ಸ್ಥಿತಿಗೆ ಬಂದು ತಲುಪಿತ್ತು. ಇದರ ನಡುವೆ ಕೊರೊನಾ ಸೋಂಕು ಆವರಿಸಿಕೊಂಡು ಇದ್ದಬದ್ದ ಆರ್ಥಿಕ ಚೈತನ್ಯವನ್ನೆಲ್ಲಾ ನಾಶಮಾಡಿದೆ. ಇದರಿಂದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ ಸಮರೋಪಾದಿಯಲ್ಲಿ ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕು'' ಎಂದು ಸಿದ್ದರಾಮಯ್ಯ ಪತ್ರದಲ್ಲಿ 16 ಅಂಶಗಳ ಸಲಹೆ ನೀಡಿದ್ದಾರೆ.