ಬೆಂಗಳೂರು: ಸೈಬರ್ ಕ್ರೈಂಗಳಿಗೆ ಲಗಾಮು ಹಾಕಲು ಚಿಂತನೆ ನಡೆಸಿರುವ ನಗರ ಪೊಲೀಸರು ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಬರ್ ಕಂಟ್ರೋಲ್ ರೂಂ ತೆರೆಯಲು ಮುಂದಾಗಿದ್ದಾರೆ.
ಡೆಬಿಟ್ ಕಾರ್ಡ್ ವಂಚನೆ, ಒಟಿಪಿ, ಬಹುಮಾನ ಆಮಿಷ ಸೇರಿದಂತೆ ತರಹೇವಾರಿ ರೀತಿಯಲ್ಲಿ ಎಲ್ಲೋ ಕುಳಿತುಕೊಂಡು ಆನ್ ಲೈನ್ ಮೂಲಕ ಮುಗ್ದ ಜನರ ಹಣ ಲಪಟಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮರು ಹಣ ಎಗರಿಸಿದಾಗ ಕೂಡಲೇ ಬ್ಯಾಂಕ್ ಖಾತೆ ಸ್ಥಗಿತಗೊಳಿಸಬೇಕು. ಹಣ ವರ್ಗಾವಣೆಯಾದಾಗ ತಡೆಯುವುದು ಹೇಗೆ ಇಂತಹ ಪ್ರಶ್ನೆಗಳಿಗೆ ಉತ್ತರವೇ ಸೈಬರ್ ಕ್ರೈಂ ಕಂಟ್ರೋಲ್.
ಆನ್ ಲೈನ್ ನಲ್ಲಿ ಹಣ ಕಳೆದುಕೊಳ್ಳುವ ಜನರು ಪೊಲೀಸರಿಗೆ ದೂರು ನೀಡುವ ಹಾಗೂ ಕ್ಷಣಾರ್ಧದಲ್ಲೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಸೈಬರ್ ಕ್ರೈಂ ನಿಯಂತ್ರಣ ಕೇಂದ್ರ ತೆರೆಯಲಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪತ್ರ ಬರೆದಿದ್ದಾರೆ. ಇದಕ್ಕೆ ಬ್ಯಾಂಕ್ ಸಹ ಕೈ ಜೋಡಿಸುವುದಾಗಿ ಹೇಳಿದೆ.
ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಕೂಡಲೇ ಗ್ರಾಹಕನ ಮೊಬೈಲ್ ಗೆ ಸಂದೇಶ ಹೊಗಲಿದೆ. ಕೂಡಲೇ ಬ್ಯಾಂಕ್ ವರ್ಗಾವಣೆ ಸ್ಥಗಿತಗೊಳಿಸಿ ಕೆಲ ಬ್ಯಾಂಕ್ ಗಳು ದೂರಿನ ಪ್ರತಿ ನೀಡುವಂತೆ ಕೇಳುತ್ತವೆ. ಎಫ್ಐಆರ್ ದಾಖಲಾಗುವ ತನಕ ಖದೀಮರು ಬ್ಯಾಂಕ್ ನಲ್ಲಿರುವ ಎಲ್ಲಾ ದುಡ್ಡನ್ನು ದೋಚಿರುತ್ತಾರೆ. ಇಂತಹ ಸಮಸ್ಯೆ ಹೋಗಲಾಡಿಸಲು ಕಂಟ್ರೋಲ್ ರೂಂ ಕೆಲಸ ಮಾಡಲಿದೆ.
ವಾಟ್ಸಾಪ್, ಎಸ್ಎಂಎಸ್ ಮೂಲಕ ದೂರು, ಅಪರಿಚಿತ ವ್ಯಕ್ತಿಗಳು ಗ್ರಾಹಕನ ಖಾತೆಯಲ್ಲಿ ಹಣ ಡ್ರಾ ಮಾಡಿದರೆ ಕೂಡಲೇ ಕಂಟ್ರೋಲ್ ರೂಂಗೆ ದೂರು ಕೊಡಬಹುದು. ತಕ್ಷಣವೇ ಕಂಟ್ರೋಲ್ ರೂಂ ಸಿಬ್ಬಂದಿ ಸಂಬಂಧಿಸಿದ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಹೇಳಲಿದ್ದಾರೆ. ಬಳಿಕ ಠಾಣೆಗೆ ಹೋಗಿ ದೂರು ನೀಡಬಹುದಾಗಿದೆ. ಗ್ರಾಹಕರ ಹಣ ಸುರಕ್ಷತೆಗಾಗಿ ಖಾಸಗಿ ಕಂಪೆನಿಗಳ ಜೊತೆ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು ಎಂದು ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.