ಬೆಂಗಳೂರು: ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿಚಾರಣೆ ಮುಗಿದಿದೆ. ಸಿಸಿಬಿಯ ಡಿಸಿಪಿ ರವಿಕುಮಾರ್ ಮುಂದೆ ಶ್ರೀನಿವಾಸ್ ಮೂರ್ತಿ ತಮಗಾದ ಬೇಸರದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನನಗೆ ನನ್ನವರೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಹೀಗೆ ಆಗುತ್ತೆ ಅಂತಾ ನನಗೂ ಗೊತ್ತಿರಲಿಲ್ಲ. ನಾವೆಲ್ಲಾ ಜೊತೆಯಲ್ಲೇ ಇದ್ದವರು. ಹಾಗಾಗಿ ಯಾರ ಮೇಲೂ ಅನುಮಾನ ಬರಲಿಲ್ಲ. ಆದ್ರೆ ಜೊತೆಯಲ್ಲಿದ್ದು ಹೀಗೆ ಮಾಡಿಬಿಟ್ರು ಎಂದು ಕೆಲ ಆಪ್ತರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ರೀತಿಯ ಘಟನೆ ಆಗುತ್ತೆ ಅಂತಾ ಏನಾದ್ರೂ ಮುಂಚಿತವಾಗಿ ಗೊತ್ತಿತ್ತಾ ಎಂಬ ಡಿಸಿಪಿ ಪ್ರಶ್ನೆಗೆ, ನನಗೆ ಏನೂ ಗೊತ್ತಿಲ್ಲ. ನನಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಬೇಸರದಿಂದ ಹೇಳಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ವಿಚಾರವಾಗಿ ಶಾಸಕ ಅಖಂಡ ಅವರು ಯಾರ ಹೆಸರನ್ನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.
ಮಾಧ್ಯಮದವರ ಜೊತೆ ಮಾತಾಡಿದ ಶಾಸಕರು, ಘಟನೆ ಸಂಬಂಧ ಹೇಳಿಕೆ ಕೊಟ್ಟಿದ್ದೇನೆ. ಏನೆಲ್ಲಾ ಆಗಿತ್ತು ಎನ್ನುವುದರ ಬಗ್ಗೆ ತಿಳಿಸಲು ಕರೆದಿದ್ರು. ಯಾರ ಮೇಲೆ ಅನುಮಾನ ಇದೆ ಅನ್ನೋದರ ಬಗ್ಗೆ ಹೇಳಲ್ಲ. ಅದು ತನಿಖೆಯಲ್ಲಿ ಗೊತ್ತಾಗಲಿ. ಯಾರೆಲ್ಲಾ ಇದ್ದಾರೆ ಎಂದು ನೀವು ಮಾಧ್ಯಮದವರೇ ತೋರಿಸಿದ್ದೀರಿ. ಅದರ ಬಗ್ಗೆ ತನಿಖೆ ನಡೆಸಲಿ. ಪೊಲೀಸರು ಸದ್ಯ ಸಿದ್ಧತೆ ನಡೆಸಿದ್ದಾರೆ ಎಂದರು.
ಅಪರಾಧಿಗಳಿಗಷ್ಟೇ ಶಿಕ್ಷೆಯಾಗಲಿ. ನಿರಪರಾಧಿಗಳಿಗೆ ಶಿಕ್ಷೆಯಾಗಬಾರದೆಂದು ಹೇಳಿದ್ದೇನೆ. ಚುನಾವಣೆಯ ವಿಚಾರವಾಗಿ ಗಲಾಟೆಯಾಗಿದೆ ಎಂಬ ಮಾತಿದೆ, ಅದರ ಬಗ್ಗೆಯೂ ತನಿಖೆಯಾಗಲಿ. ಸದ್ಯ ಮನೆ ಮೇಲೆ ಬೆಂಕಿ ಹಚ್ಚಿರುವ ವಿಚಾರವಾಗಿ ತನಿಖೆ ನಡೆಯಲಿ. ಕ್ಷೇತ್ರದ ಜನತೆ ನೆಮ್ಮದಿಯಿಂದ ಇರಬೇಕು. ಈ ಕುರಿತು ಕಮಿಷನರ್ಗೆ ಮನವಿ ಮಾಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದ್ರೆ ಬರ್ತೀನಿ ಎಂದು ಶಾಸಕ ಹೇಳಿದ್ದಾರೆ.