ಬೆಂಗಳೂರು : ಮಹಾನಗರದ ರಸ್ತೆ ಗುಂಡಿ ನಿರಂತರವಾಗಿ ಪ್ರಾಣಬಲಿ ಪಡೆಯುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ದಿವ್ಯ ನಿರ್ಲಕ್ಷ್ಯವನ್ನು ಮುಂದುವರಿಸಿದೆ. ದಿನಕ್ಕೊಬ್ಬರು ಬಿದ್ದು ಸಾವು-ನೋವು ಅನುಭವಿಸುತ್ತಿರುವ ಸಂದರ್ಭದಲ್ಲಿ ಇದೀಗ ನಗರಕ್ಕೆ ಅತಿದೊಡ್ಡ ತೆರಿಗೆ ಮೂಲವಾಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇದರ ವಿರುದ್ಧ ದನಿ ಎತ್ತಿರುವುದು ಕೊಂಚ ಬದಲಾವಣೆಯ ನಿರೀಕ್ಷೆ ಮೂಡಿಸಿದೆ.
ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ, ದಿಢೀರ್ ರಸ್ತೆ ಮಧ್ಯೆ ಗುಂಡಿ ತೋಡಿ ಹಾಗೆಯೇ ಬಿಡುವುದು, ರಸ್ತೆ ಅಂಚುಗಳಲ್ಲಿ ತೆರೆದ ಗುಂಡಿಗಳಿಗೆ ಸೂಚನಾ ಫಲಕ ಅಳವಡಿಸದಿರುವುದು, ಯಾವುದೇ ಮುನ್ನೆಚ್ಚರಿಕೆ, ಸೂಚನೆ ನೀಡದೇ ರಸ್ತೆಗಳಲ್ಲಿ ಕಾಮಗಾರಿ ಆರಂಭಿಸುವುದು ಸೇರಿದಂತೆ ಹಲವು ಚಟುವಟಿಕೆಗಳು ಬೆಂಗಳೂರಿನ ಪ್ರತಿ ರಸ್ತೆಯಲ್ಲಿ ನಿತ್ಯವೂ ಗೋಚರಿಸುತ್ತವೆ.
ಖುದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರೂ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ನಿರಂತರ ಸಭೆಗಳನ್ನು ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರೂ, ದಪ್ಪಚರ್ಮದ ಅಧಿಕಾರಿಗಳು ಸಿಎಂ ಆದೇಶವನ್ನು ಪಾಲನೆಗೆ ತರುತ್ತಿಲ್ಲ.
ಅದರಿಂದ ದಿನಕ್ಕೊಂದು ಅನಾಹುತ ಸಂಭವಿಸುತ್ತಿವೆ. ಕಳೆದ ತಿಂಗಳು ರಸ್ತೆಯಲ್ಲಿ ತೆರೆದಿಟ್ಟ ಗುಂಡಿಗೆ ಬಿದ್ದು ಸಾಫ್ಟ್ವೇರ್ ಬಲಿಯಾಗಿದ್ದರು. ಸರ್ಕಾರ ಗಟ್ಟಿದನಿಯಲ್ಲಿ ಆದೇಶ ಮಾಡಿದಾಗ ಒಂದಿಷ್ಟು ಭಾಗದಲ್ಲಿ ತೇಪೆ ಹಚ್ಚುವ ಕಾರ್ಯ ಮಾತ್ರ ನಡೆಯುತ್ತದೆ. ಅದೂ ಕಳಪೆ ಕಾಮಗಾರಿ ಅನ್ನುವುದು ಗಮನಿಸಬೇಕಾದ ಅಂಶ.
ಹೈಕೋರ್ಟ್ ಆದೇಶ : ನಗರದ ರಸ್ತೆ ಅವ್ಯವಸ್ಥೆಯ ವಿಚಾರವಾಗಿ ಬಿಬಿಎಂಪಿಯನ್ನು ಆಗಾಗ ತರಾಟೆಗೆ ತೆಗೆದುಕೊಳ್ಳುವ ಹೈಕೋರ್ಟ್ ಏ.5ರಂದು ಅಸಮಾಧಾನ ಹೊರಹಾಕಿದೆ. ಏ.19ರ ಒಳಗೆ ಬಿಬಿಎಂಪಿ 8 ವಲಯಗಳ ಕ್ರಿಯಾ ಯೋಜನೆ ಸಲ್ಲಿಸಿ ಎಂದಿದೆ. ಮಾ.15ರಂದೇ ಹೈಕೋರ್ಟ್ ಟೆಕ್ಕಿ ಅಶ್ವಿನ್ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿ, 15 ದಿನದಲ್ಲಿ ನಗರದೆಲ್ಲೆಡೆ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಿತ್ತು. ಆದರೆ, ಆರಂಭದಲ್ಲಿ ಕಂಡ ಆಸಕ್ತಿ ನಂತರದ ದಿನದಲ್ಲಿ ಕಂಡಿಲ್ಲ. ನಗರದಲ್ಲಿ ಸಾಕಷ್ಟು ಗುಂಡಿಗಳು ನರ ಬಲಿಗೆ ಕಾದು ಕುಳಿತಿವೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಕ್ರೋಶ : ಪ್ರಮುಖ ಉದ್ಯಮಿ ಟಿ.ವಿ.ಮೋಹನ್ ದಾಸ್ ಪೈ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಂಗಳೂರು ನಗರ ದೇಶದಲ್ಲೇ ಅತಿ ಹೆಚ್ಚು ಆದಾಯ ತೆರಿಗೆಯನ್ನು ನೀಡುವ ನಗರ. 2021-22ರಲ್ಲಿ 11.69 ಲಕ್ಷ ಕೋಟಿ ಆದಾಯ ತೆರಿಗೆ ಪಾವತಿ, ಇಲ್ಲಿನ ರಸ್ತೆಗಳು ಕೆಟ್ಟದಾಗಿವೆ. ವಾಹನ ದಟ್ಟಣೆ ಇರುತ್ತದೆ. ಜೀವನ ಗುಣಮಟ್ಟ ಕುಸಿದು ಹೋಗಿದ್ದು, ಕೇಂದ್ರ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ಪ್ರಧಾನಿಯವರೇ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರ ನೆರವಿಗೆ ಧಾವಿಸಿ ಎಂದು ಹೇಳಿದ್ದಾರೆ.
ತಮ್ಮ ಟ್ವೀಟ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಖಾತಾಬುಕ್ ಕಂಪನಿ ಸ್ಥಾಪಕ ಹಾಗೂ ಸಿಇಒ ರವೀಶ್ ನರೇಶ್ ಬೆಂಗಳೂರು ರಸ್ತೆಗಳ ದುಸ್ಥಿತಿಯ ಬಗ್ಗೆ ಇತ್ತೀಚೆಗೆ ಟ್ವೀಟ್ ಮಾಡಿದ್ದು, ಹೆಚ್ಎಸ್ಆರ್, ಕೋರಮಂಗಲದಲ್ಲಿ (ಭಾರತದ ಸಿಲಿಕಾನ್ ವ್ಯಾಲಿ) ಸ್ಟಾರ್ಟ್ಅಪ್ಗಳು ಈಗಾಗಲೇ ಶತಕೋಟಿ ಡಾಲರ್ನಷ್ಟು ತೆರಿಗೆ ಪಾವತಿಸುತ್ತಿವೆ.
ಆದರೂ ನಮ್ಮಲ್ಲಿ ಕೆಟ್ಟ ರಸ್ತೆಗಳು, ಬಹುತೇಕ ದಿನನಿತ್ಯದ ವಿದ್ಯುತ್ ಕಡಿತ, ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಾಲುದಾರಿಗಳು ಎದ್ದು ಕಾಡುತ್ತಿವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲಸೌಕರ್ಯವನ್ನು ಹೊಂದಿವೆ’ ಎಂದು ಟೀಕಿಸಿದ್ದರು.
ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಿಎಂಟಿಸಿ ಬಸ್ಗೆ ಬೆಂಕಿ; ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡು