ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶಾಲಯ (E D.) ಬೆಳಗ್ಗೆಯಿಂದಲೇ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಯುಬಿ ಸಿಟಿ ಹಾಗೂ ಕಂಟ್ಮೋನೆಂಟ್ ರೈಲ್ವೆ ನಿಲ್ದಾಣ ಬಳಿಯಿರುವ ನಿವಾಸ ಹಾಗೂ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಟ್ರಾವೆಲ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಹಾರದ ದಾಖಲೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಟ್ರಾವೆಲ್ ಸಿಬ್ಬಂದಿಯನ್ನು ಒಬ್ಬೊಬ್ಬರನ್ನೇ ಒಳಗಡೆ ಕರೆಸಿ ಮಾಹಿತಿ ಪಡೆಯಲಾಗುತ್ತಿದೆ.
2019ರಲ್ಲಿ ಜಮೀರ್ ವಿಚಾರಣೆ..
ಈ ಹಿಂದೆ ಇಡಿ ಅಧಿಕಾರಿಗಳು ಜಮೀರ್ಗೆ ನೋಟಿಸ್ ನೀಡಿದ್ದರು. ಆಗ ನೋಟಿಸ್ ಪಡೆಯದೆ ಜಮೀರ್ ಮೊಂಡಾಟ ನಡೆಸಿ, ಮನೆ ಬಾಗಿಲಲ್ಲಿ ಅಧಿಕಾರಿಗಳನ್ನ ಅರ್ಧ ಗಂಟೆ ಕಾಯಿಸಿದ್ದರು ಎನ್ನಲಾಗ್ತಿದೆ. ಆನಂತರ ಸ್ಥಳೀಯ ಪೊಲೀಸರು ಬಂದ ಬಳಿಕ ನೋಟಿಸ್ ಪಡೆದಿದ್ದರು.
ಅದರಂತೆ 2019ರ ಜುಲೈನಲ್ಲಿ ಮೊದಲು ಇಡಿ ಅಧಿಕಾರಿಗಳು ಜಮೀರ್ ಅವರನ್ನು ವಿಚಾರಣೆ ನಡೆಸಿದ್ದರು. ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ನೊಂದಿಗೆ ಪ್ರಾಪರ್ಟಿ ಮಾರಾಟ ವಿಚಾರವಾಗಿ ಮಾತ್ರ ಸಂಬಂಧ ಹೊಂದಿರುವುದಾಗಿ ಜಮೀರ್ ಸ್ಪಷ್ಟನೆ ನೀಡಿದ್ದರು.
ಪರಿಶೀಲನೆ ವೇಳೆ ಮನೆಯಲ್ಲಿದ್ದ ರೋಷನ್ ಬೇಗ್..
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐನಿಂದ ತನಿಖೆ ನಡೆಯುತ್ತಿದ್ದು, ಮತ್ತೊಂದೆಡೆ ರೋಷನ್ ಬೇಗ್ ಮತ್ತು ಜಮೀರ್ ಅಹಮದ್ ಖಾನ್ ಅವರ ಆಸ್ತಿ, ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕುತ್ತಿದೆ.
ಕಳೆದ ವರ್ಷ ಸಿಬಿಐ ರೋಷನ್ ಬೇಗ್ ಅವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ. ದಾಳಿಯ ವೇಳೆ ಮನೆಯಲ್ಲೇ ಇದ್ದ ರೋಷನ್ ಬೇಗ್ ಅವರ ಸಮ್ಮುಖದಲ್ಲೇ ಮನೆಯ ಎಲ್ಲಾ ಲಾಕರ್ ಓಪನ್ ಮಾಡಿಸಿ, ಅದರಲ್ಲಿನ ಎಲ್ಲಾ ದಾಖಲೆ ಪತ್ರಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಜಮೀರ್ ಅಹಮದ್ ಮನೆ ಮೇಲೆ ನಡೆದಿರುವುದು ಐಟಿ ಅಲ್ಲ, ಇಡಿ ದಾಳಿ