ಬೆಂಗಳೂರು: ಮಾಜಿ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿರುವ ಬೆನ್ನಲ್ಲೆ ಮತ್ತೊಬ್ಬ ಕಾಂಗ್ರೆಸ್ನ ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ದಾಖಲಾಗಿದೆ.
ಜಾರ್ಜ್ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಅವರು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಅಡಿ (ಫೆಮಾ ಕಾಯ್ದೆ) ಪ್ರಕರಣ ದಾಖಲಿಸಿಕೊಂಡು ಜಾರ್ಜ್ ಆಸ್ತಿ ವಿವರ ಕಲೆಹಾಕುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಜಾರ್ಜ್ ಅವರು ಲೋಕಾಯುಕ್ತಕ್ಕೆ ಸಲ್ಲಿಸಿದ ಆಸ್ತಿಗೂ, ಪ್ರಸ್ತುತ ಸಂಪಾದಿಸಿದ ಆಸ್ತಿಗೂ ತುಂಬಾ ವ್ಯತ್ಯಾಸ ಕಂಡು ಬಂದಿದೆ ಎಂದು ರವಿಕೃಷ್ಣಾ ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದ ಪರಿಣಾಮ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ:
ಜಾರ್ಜ್ ಅವರು ಬೆಂಗಳೂರಿನ ಕೆಲವೆಡೆ ಅಪಾರ್ಟ್ಮೆಂಟ್, ಬಾಡಿಗೆ ಮನೆಗಳು, ಹಲವು ಕಂಪನಿಗಳನ್ನ ಹೊಂದಿದ್ದಾರೆ. ಇದಷ್ಟೇ ಅಲ್ಲ, ತನ್ನ ಕುಟುಂಬಸ್ಥರ ಹೆಸರಿನಲ್ಲಿ ನ್ಯೂಯಾರ್ಕ್ನಲ್ಲಿ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಇದು ಪುತ್ರಿ ರೇನಿಕಾ ಅಬ್ರಹಾಂ ಅಳಿಯ ಕೇವಿನ್ ಅವರ ಹೆಸರಿನಲ್ಲಿ ಇರುವುದು ಗೊತ್ತಾಗಿದೆ. ಇಡಿ ಅಧಿಕಾರಿಗಳು ಯಾವ ಸಂದರ್ಭದಲ್ಲಾದರೂ ಜಾರ್ಜ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.