ಬೆಂಗಳೂರು: ಡಿ. 3ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ನಂತರ ಯಾರೂ ಪ್ರಚಾರ ನಡೆಸುವಂತಿಲ್ಲ. ಡಿ. 4ರ ಸಂಜೆ 6 ಗಂಟೆಗೆ ಮತದಾರರಲ್ಲದವರು ಕ್ಷೇತ್ರ ತೊರೆಯಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸೂಚನೆ ನೀಡಿದ್ದಾರೆ.
ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳ ಉಪ ಚುನಾವಣೆಗೆ ಡಿ. 5ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಡಿ. 9ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದರು.
156 ಪುರುಷ ಮತ್ತು 9 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದು, 4,711 ಸರ್ವೀಸ್ ಮತದಾರರು ಸೇರಿದಂತೆ 37,82,681 ಮತದಾರರು ಮತ ಚಲಾವಣೆ ಮಾಡಲಿದ್ದಾರೆ ಎಂದರು. ಮತದಾನಕ್ಕೂ 48 ಗಂಟೆ ಮೊದಲು ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ನಿಲ್ಲಿಸಬೇಕು. ಆದರೆ ಮನೆ ಮನೆ ಪ್ರಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಮತದಾನದ ಹಿಂದಿನ ದಿನ ಸಂಜೆ 6 ಗಂಟೆ ನಂತರ ಹೋಟೆಲ್, ಲಾಡ್ಜ್ ಪರಿಶೀಲನೆ ನಡೆಸಲಾಗುತ್ತದೆ. ಮತದಾರರಲ್ಲದವರು ಕ್ಷೇತ್ರ ತೊರೆಯಬೇಕು ಎಂದರು.
ಮತದಾನಕ್ಕೂ ಮೊದಲ 48 ಗಂಟೆ ಅವಧಿಯನ್ನು ಸೈಲೆನ್ಸ್ ಪೀರಿಯಡ್ ಎಂದು ಘೋಷಿಸಿದ್ದು, ಈ ಸಮಯದಲ್ಲಿ ಅಭ್ಯರ್ಥಿಗಳು, ಪಕ್ಷಗಳ ನಾಯಕರು, ತಾರಾ ಪ್ರಚಾರಕರು ಉಪ ಚುನಾವಣೆಗೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಗಳನ್ನು ನಡೆಸುವಂತಿಲ್ಲ. ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ ಎಂದು ಸೂಚನೆ ನೀಡಿದರು.