ಬೆಂಗಳೂರು : ಮೊದ ಮೊದಲಿಗೆ ಕೊರೊನಾ ಕಾಣಿಸಿದ ಸಂದರ್ಭದಲ್ಲಿ ಸೋಂಕಿತರನ್ನು ಅಸಹ್ಯವಾಗಿ ನೋಡಲಾಗುತ್ತಿತ್ತು. ಸಂಪೂರ್ಣ ಗುಣಮುಖರಾಗಿ ಯಾರನ್ನಾದರೂ ಮಾತಾಡಿಸಲು ಹೋದ್ರೆ ಹತ್ತಿರಕ್ಕೂ ಬಿಟ್ಟುಕೊಳ್ತಿರಲಿಲ್ಲ. ಸೌಜನ್ಯದ ಮಾತುಗಳನ್ನಾಡಿ ಧೈರ್ಯ ತುಂಬಬೇಕಾದ ನೆರೆಹೊರೆಯವರು, ಸಂಬಂಧಿಕರು ಅನುಮಾನದಿಂದ, ಸಮಾಜಕ್ಕೆ ಕಳಂಕ ಎಂಬಂತೆ ನೋಡತ್ತಿದ್ದರು.
ರಾಜ್ಯದಲ್ಲಿ ರೋಗ ಕಾಣಿಸಿ 7 ತಿಂಗಳಾದರೂ ಅನುಮಾನದ ದೃಷ್ಟಿಕೋನ ಇನ್ನೂ ಬದಲಾಗಿಲ್ಲ. ಅದನ್ನು ತಪ್ಪಿಸಲು ಪಾಲಿಕೆ ಮತ್ತು ಆರೋಗ್ಯ ಇಲಾಖೆ ಹಲವು ಉಪಾಯಗಳನ್ನು ಮಾಡಿದ್ದು, ಅವು ಹೀಗಿವೆ..
ಸೋಂಕಿತರು ಮುಜುಗರಕ್ಕೊಳಗಾಗುವುದನ್ನ ತಪ್ಪಿಸಲು ಆರೋಗ್ಯ ಇಲಾಖೆ ಮತ್ತು ಆಯಾ ಜಿಲ್ಲೆಗಳ ಪಾಲಿಕೆಗಳು ಹಲವಾರು ಉಪಾಯ ಮಾಡಿವೆ. ನಗರದಲ್ಲಿ ಹೆಚ್ಚೆಚ್ಚು ಪರೀಕ್ಷೆ, ರಸ್ತೆ ರಸ್ತೆಗಳಲ್ಲೂ ಮೊಬೈಲ್ ವಾಹನದ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ದಿನಕ್ಕೆ 35 ಸಾವಿರ ಟೆಸ್ಟ್ ನಡೆಸಲಾಗುತ್ತಿದೆ. ಕೊರೊನಾ ಬಂದ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿಗೆ ಜನ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ, ಬಿಬಿಎಂಪಿ ಹೊಸ ನಿಯಮ ಮಾಡಿದ್ದು, ಈ ಸೋಷಿಯಲ್ ಸ್ಟಿಗ್ಮ ದೂರ ಮಾಡಲು, ಪಾಸಿಟಿವ್ ಬಂದ ವ್ಯಕ್ತಿಯ ಮನೆ ಸುತ್ತಮುತ್ತ ನಿರ್ಬಂಧಿಸುವುದನ್ನು ಸ್ಥಗಿತ ಮಾಡಿದೆ. ಹಾಗೆಯೇ ಮನೆ ಮುಂದೆ ಪೋಸ್ಟರ್ ಅಂಟಿಸುವುದನ್ನೂ ನಿಲ್ಲಿಸಿದೆ. ಪಾಸಿಟಿವ್ ಬಂದ್ರೆ ಯಾರು ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಇರಬೇಕು ಎಂದು ಸೋಂಕಿತರು ತಿಳಿಸಿದ್ದಾರೆ.
ಆದ್ರೂ ಜನ ತಾರತಮ್ಯದಿಂದ ನೋಡುತ್ತಿದ್ದಾರೆ. ಇದು ಬದಲಾಗಬೇಕು. ಸೋಂಕಿತರಾದ್ರೇ ಅವರ ಸ್ನೇಹಿತರು, ಕುಟುಂಬಸ್ಥರು, ಸಹೋದ್ಯೋಗಿಗಳು ಕೂಡ ಆತ್ಮಸ್ಥೈರ್ಯ ತುಂಬಿ ಕಾಯಿಲೆಯಿಂದ ಗುಣಮುಖರಾಗಲು ಬೆಂಬಲ ನೀಡುವುದು ಅಗತ್ಯ.