ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳ 1,191 ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳು ಹಾಗೂ 3285 ತಾಲೂಕು ಪಂಚಾಯಿತಿ ಮತ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಚುನಾವಣಾ ಆಯೋಗ ಕರಡು ಅಧಿಸೂಚನೆ ಪ್ರಕಟಿಸಿದೆ.
ಎಲ್ಲಾ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಏಪ್ರಿಲ್ ಅಂತ್ಯಕ್ಕೆ ಕೊನೆಗೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾದ ಕಾರಣ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಇದೀಗ ಆಯೋಗವು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.ರಾಜ್ಯಪತ್ರದಲ್ಲಿ ಎಲ್ಲಾ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು, ಮೈಸೂರು, ದಾವಣಗೆರೆ, ಬೆಳಗಾವಿ, ಕಲಬುರಗಿ ಸೇರಿದಂತೆ ಎಲ್ಲಾ ಜಿಲ್ಲೆಗಳ 1,191 ಮತ ಕ್ಷೇತ್ರಗಳಿಗೆ ಹೊಸದಾಗಿ ಮೀಸಲಾತಿ ನಿಗದಿಪಡಿಸಲಾಗಿದೆ. ಅದೇ ರೀತಿ ಇತ್ತೀಚೆಗೆ ಹೊಸದಾಗಿ 56 ತಾಲೂಕುಗಳು ರಚನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಮತ ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಈ ಹಿಂದೆ 10 ಸಾವಿರ ಮತದಾರರಿಗೆ ಇದ್ದ ಒಂದು ಮತ ಕ್ಷೇತ್ರವನ್ನು ಈಗ 12ರಿಂದ 15 ಸಾವಿರ ಮತದಾರರಿಗೆ ಒಂದು ಕ್ಷೇತ್ರವಾಗಿ ಪುನರ್ ವಿಂಗಡಣೆ ಮಾಡಲಾಗಿತ್ತು.
ಇದರಿಂದಾಗಿ ರಾಜ್ಯದಲ್ಲಿ ಇದುವರೆಗೂ 3,903 ತಾಲೂಕು ಪಂಚಾಯತಿ ಕ್ಷೇತ್ರಗಳ ಪೈಕಿ 618 ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿವೆ. ಪ್ರಸ್ತುತ 3285 ಕ್ಷೇತ್ರಗಳು ಮಾತ್ರ ಉಳಿದಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹ
ಕ್ಷೇತ್ರ ಮರುವಿಂಗಡಣೆಯಿಂದ ಹಲವು ಗ್ರಾಮೀಣ ಪ್ರದೇಶಗಳು ನಗರ ಪ್ರದೇಶವಾಗಿ ಪರಿವರ್ತನೆಯಾಗಿವೆ. ಭೌಗೋಳಿಕವಾಗಿ ಕ್ಷೇತ್ರದ ವ್ಯಾಪ್ತಿ ಬದಲಾಗಿರುವುದರಿಂದ ರಾಜ್ಯದ ಎಲ್ಲಾ ತಾಲೂಕು ಪಂಚಾಯಿತಿಗಳ ಮೀಸಲಾತಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು 2021ರ ನಿಯಮ 5(ಬಿ)ರಂತೆ ಹೊಸ ಮತಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಹಾಗಾಗಿ ಪ್ರತಿ ಕ್ಷೇತ್ರದ ಮೀಸಲಾತಿಯನ್ನು ಹೊಸದಾಗಿ ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆಕ್ಷೇಪಣೆ ಸಲ್ಲಿಸಲು ಜುಲೈ 8ರವರೆಗೆ ಅವಕಾಶವಿದೆ. ಈ ಕರಡು ಅಧಿಸೂಚನೆ ಸಂಬಂಧ ಯಾವುದೇ ಆಕ್ಷೇಪಗಳಿದ್ದರೂ ಜುಲೈ 8ರೊಳಗೆ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳು, 1ನೇ ಮಹಡಿ, ಕೆಎಸ್‍ಸಿಎಂಎಫ್ ಕಟ್ಟಡ, ನಂ.8, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು ಇಲ್ಲಿಗೆ ಸಲ್ಲಿಸಲು ತಿಳಿಸಲಾಗಿದೆ.