ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗುವ ವಿಪತ್ತುಗಳ ತೀವ್ರತೆಯು ಮನುಕುಲವನ್ನು ಸದಾ ಪೀಡಿಸುತ್ತಲೇ ಬಂದಿದೆ. ಋತುಮಾನಗಳು ತಮ್ಮ ಆವರ್ತಗಳನ್ನು ಬದಲಿಸುತ್ತವೆ. ಅದರ ಪರಿಣಾಮವಾಗಿ ಅಕಾಲಿಕ ಬರಗಾಲಗಳು ಮತ್ತು ಪ್ರವಾಹಗಳಲ್ಲಿ ಏರಿಕೆಯಾಗುತ್ತಿದೆ. ಪ್ರಕೃತಿಯ ಈ ಆಕ್ರೋಶ ಎಲ್ಲ ದೇಶಗಳನ್ನು ಯಾವುದೇ ತಾರತಮ್ಯವಿಲ್ಲದೇ ತೊಂದರೆಗೆ ಸಿಲುಕಿಸುತ್ತಿದೆ.
ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮುಂಬರುವ 80 ವರ್ಷಗಳಲ್ಲಿ ತಾಪಮಾನದಲ್ಲಿ ಆಗಲಿರುವ ಬದಲಾವಣೆಯ ಮೊದಲ ವಿಸ್ತೃತ ವರದಿಯು ವಿನಾಶಕಾರಿ ಘಟನಾವಳಿಗಳ ಸರಮಾಲೆಯನ್ನೇ ಅನಾವರಣಗೊಳಿಸಿದೆ. ವಾಸ್ತವವಾಗಿ ಹೇಳುವುದಾದರೆ, ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್ – ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಕೌನ್ಸಿಲ್) ಕಳೆದ ಒಂದೂವರೆ ವರ್ಷದಿಂದ ದೇಶದ ಶೇಕಡಾ ೨೦ರಷ್ಟು ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ, ತಾಪಮಾನ ಬದಲಾವಣೆಯು ನೀರಾವರಿಯ ಮೇಲೆ ಉಂಟು ಮಾಡಲಿರುವ ಪ್ರಭಾವವನ್ನು ಅಂದಾಜಿಸಿದೆ. ದೇಶದ ೧೫೦ಕ್ಕೂ ಹೆಚ್ಚು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆಗಳು, ತೋಟಗಳು ಮತ್ತು ಜಾನುವಾರುಗಳ ಮೇಲೆ ತಾಪಮಾನದ ಬದಲಾವಣೆ ಉಂಟು ಮಾಡುತ್ತಿರುವ ಪರಿಣಾಮಗಳನ್ನು ಅದು ಬಿಂಬಿಸಿದೆ.
ಕಳೆದ ಹತ್ತು ವರ್ಷಗಳಲ್ಲಿ ಬಂದಿರುವ ಹಲವಾರು ಅಂತಾರಾಷ್ಟ್ರೀಯ ವರದಿಗಳು ಸಹ ಇತರ ದೇಶಗಳ ಜೊತೆಗೆ ಭಾರತವೂ ಒಳಗಾಗಲಿರುವ ನಷ್ಟಗಳನ್ನು ಅಂದಾಜಿಸಿವೆ. ಇತ್ತೀಚಿನ ಈ ಕಸರತ್ತು ದೇಶದ ಭೌಗೋಳಿಕ ಪರಿಸ್ಥಿತಿಗಳನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಿದ್ದು, ೨೧೦೦ರ ವೇಳೆಗೆ ತಾಪಮಾನದಲ್ಲಿ ಶೇಕಡಾ ೪.೪ ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆ ಹೊತ್ತಿಗೆ, ಬಿಸಿಗಾಳಿಗಳ ತೀವ್ರತೆಯು ಮೂರರಿಂದ ನಾಲ್ಕು ಪಟ್ಟು ಹೆಚ್ಚಲಿದೆ ಹಾಗೂ ಗುಡುಗುಮಿಶ್ರಿತ ಬಿರುಗಾಳಿಗಳ ಹೊಡೆತದಿಂದಾಗಿ ಸಮುದ್ರ ಮಟ್ಟದಲ್ಲಿ ಮೂವತ್ತು ಸೆಂ.ಮೀ.ನಷ್ಟು ಏರಿಕೆಯಾಗಲಿರುವ ಮುನ್ಸೂಚನೆಯು ಭೀತಿ ಮೂಡಿಸುವಂತಿದೆ.
ಪರಿಸರ ಬದಲಾವಣೆಯ ಪರಿಣಾಮಗಳಿಗೆ ಸಂಬಂಧಿಸಿದಂತೆ ಆರು ವರ್ಷಗಳ ಹಿಂದೆ ಬಂದಿದ್ದ ಸುದ್ದಿಯೊಂದು, ಮುಂದಿನ ನಾಲ್ಕು ದಶಕಗಳಲ್ಲಿ ಹಿಮಾಲಯವು ತನ್ನ ಹಿಮನದಿಗಳ ಶೇಕಡಾ ೧೩ರಷ್ಟು ಹಿಮ ಹೊದಿಕೆಯನ್ನು ಕಳೆದುಕೊಳ್ಳಲಿದೆ ಎಂದು ಹೇಳುವ ಮೂಲಕ ಭೀತಿ ಮೂಡಿಸಿತ್ತು. ಒಂದು ವೇಳೆ, ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಲು ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮುಂದಾಗದಿದ್ದರೆ ದೇಶ ತೀವ್ರ ನಾಶವನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಚುರುಕಾಗಿ ಜಂಟಿ ಕ್ರಮವನ್ನು ಸಂಘಟಿತವಾಗಿ ಕೈಗೊಳ್ಳಬೇಕು ಎಂಬ ಎಚ್ಚರಿಕೆಯನ್ನು ಆಗ ನೀಡಲಾಗಿತ್ತು.
ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಂಗಾಲ ಉಗುಳುವಿಕೆ ಮತ್ತು ಇದರಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ, ಹಿಮನದಿಗಳ ಕರಗುವಿಕೆ ಮತ್ತು ಸಮುದ್ರ ಮಟ್ಟದಲ್ಲಿ ಏರಿಕೆಗಳ ಫಲವಾಗಿ ಇನ್ನೂ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ಇದರಿಂದಾಗಿ ಕಡಲ ತೀರದಲ್ಲಿರುವ ಎಲ್ಲ ಪಟ್ಟಣಗಳು ಮತ್ತು ನಗರಗಳು ಮುಳುಗುತ್ತವೆ. ಏರುಪೇರಾಗಿರುವ ಹವಾಮಾನ ಚಕ್ರವು ಪ್ರವಾಹ ಮತ್ತು ಬರಗಾಲಗಳಿಗೆ ಕಾರಣವಾಗಿ ಬೆಳೆಗಳ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಇವೆಲ್ಲವುಗಳಿಂದಾಗಿ ಮನುಷ್ಯನ ಜೀವನ ತೀವ್ರ ಅಪಾಯಕ್ಕೆ ಸಿಲುಕಲಿದೆ. ಅದೇ ರೀತಿ, ಸರಕಾರದ ಅಂಕಿ ಅಂಶಗಳ ಪ್ರಕಾರ, ಇಡೀ ಉಪಖಂಡದ ೪ ಕೋಟಿ ಹೆಕ್ಟೇರ್ ಭೂಪ್ರದೇಶ ಪ್ರವಾಹಕ್ಕೆ ಸಿಲುಕುವ ಭೀತಿಗೆ ಒಳಗಾಗಿದ್ದರೆ, ಶೇಕಡಾ ೬೮ರಷ್ಟು ಭೂಪ್ರದೇಶ ಬರಪೀಡಿತವಾಗಲಿದೆ.
ದಶಕಗಳ ಕಾಲ ಹವಾಮಾನ ಸಮತೋಲನದ ಮೇಲೆ ಎಸಗಲಾದ ವಿವೇಚನಾರಹಿತ ಹಾನಿಯು ಭತ್ತದ ಸಾಗುವಳಿಯ ಮೇಲೆ ಶೇಕಡಾ ೧೦೦ರಷ್ಟು, ಮೆಕ್ಕೆಜೋಳದ ಮೇಲೆ ಶೇಕಡಾ ೯೦ರಷ್ಟು ಹಾಗೂ ಸೊಯಾಬೀನ್ ಸಾಗುವಳಿಯ ಮೇಲೆ ಶೇಕಡಾ ೮೦ರಷ್ಟು ಹಾನಿಯುಂಟು ಮಾಡಲಿದೆ ಎಂದು ವಿಶ್ವ ಸಂಸ್ಥೆಯ ವರದಿ ಕೇವಲ ಮೂರು ತಿಂಗಳುಗಳ ಹಿಂದೆ ಹೇಳಿತ್ತು. ಹವಾಮಾನ ಬದಲಾವಣೆಯಿಂದಾಗಿ ಭಾರತದ ಬಾಳೆಹಣ್ಣಿನ ಉತ್ಪಾದನೆ ಇಳಿಕೆ ಕಾಣಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶ ಮತ್ತು ಕಾಂಕ್ರೀಟೀಕರಣದ ಪರಿಣಾಮವಾಗಿ ಹವಾಮಾನದಲ್ಲಿ ಅಸಹಜ ಬದಲಾವಣೆ ಉಂಟಾಗುತ್ತಿದ್ದು ಈಶಾನ್ಯ ಭಾರತ, ಪಶ್ಚಿಮ ಘಟ್ಟಗಳ ಸಹಿತ ಹಿಮಾಲಯದ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹಲವಾರು ವರದಿಗಳು ಮತ್ತು ವಿಶ್ಲೇಷಣೆಗಳು ವಿವರಿಸಿವೆ.
ಒಂದು ವೇಳೆ ಸರಿಪಡಿಸುವ ಕ್ರಮಗಳಿಗೆ ಭಾರತ ಮುಂದಾಗದಿದ್ದರೆ, 2050ರ ವೇಳೆಗೆ ಅದು ಸಾಗರೋತ್ತರ ಪ್ರದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಅತಂತ್ರ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತದೆ ಎಂದು ವಿಶ್ವ ಬ್ಯಾಂಕ್ ಕಳೆದ ವರ್ಷವೇ ಎಚ್ಚರಿಸಿತ್ತು. ಮಿಡತೆಗಳು ಕೂಡಾ ಸರಕಾರಗಳಿಗೆ ಸವಾಲನ್ನು ಒಡ್ಡಬಲ್ಲವು ಎಂಬುದನ್ನು ಹವಾಮಾನ ಬದಲಾವಣೆ ಸಾಬೀತುಪಡಿಸಿದೆ. ಆಳುವವರು ತೋರುವ ಯಾವುದೇ ರೀತಿಯ ನಿರ್ಲಕ್ಷ್ಯವು ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸುತ್ತದೆ.
ಭೂಮಿಯ ತಾಪಮಾನ ನಿಯಂತ್ರಿಸಬೇಕೆಂದರೆ ಅರಣ್ಯದ ಹೊದಿಕೆಯನ್ನು ಹೆಚ್ಚಿಸುವುದು; ಇಂಧನ ಬಳಕೆ, ಭೂಮಿಯ ಬಳಕೆ, ಸಾರಿಗೆ, ನಿರ್ಮಾಣ ಮತ್ತು ಕೈಗಾರಿಕಾ ವಲಯಗಳಲ್ಲಿ ಸಕಾರಾತ್ಮಕ ಸುಧಾರಣೆಗಳು; ಬೆಳೆ ಪದ್ಧತಿಯಲ್ಲಿ ಬದಲಾವಣೆಗಳು ಸರಕಾರಗಳ ಯೋಜನೆಯ ಅವಿಭಾಜ್ಯ ಅಂಗವಾಗಬೇಕು. ಒಂದು ವೇಳೆ ಆಳುವ ವರ್ಗಗಳು ಸಕಾಲಿಕವಾಗಿ ಎಚ್ಚರಗೊಳ್ಳದೇ ಹೋದರೆ, ನೈಸರ್ಗಿಕ ವಿಪತ್ತುಗಳು ನಮ್ಮೆಲ್ಲರ ಬದುಕಿನ ಮೇಲೆ ವ್ಯಾಪಕ ಹಾನಿಯನ್ನು ತರಲಿವೆ!