ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳು ಮಾತ್ರವಲ್ಲದೆ, ಮುಖ್ಯಮಂತ್ರಿಗಳು, ಶಾಸಕ, ಸಚಿವರು ಸೇರಿ ಪ್ರಮುಖ ಜನಪ್ರತಿನಿಧಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದರು.
ಪ್ರಥಮ PUC ಪರೀಕ್ಷೆ ಆಧರಿಸಿ ಗ್ರೇಡಿಂಗ್:
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಈಗ ನಡೆಸಲ್ಲ. ಹೀಗಾಗಿ ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಕೊರೊನಾ ಕಡಿಮೆಯಾದ ನಂತರ ಮತ್ತೊಮ್ಮೆ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್. ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.