ಬೆಂಗಳೂರು: ಆರ್.ಟಿ.ಇ.ಶುಲ್ಕ ಮರುಪಾವತಿಯಾಗಿದೆ ಎನ್ನುವ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು ಎಂದಿರುವ ಖಾಸಗಿ ಶಾಲೆಗಳ ಆರೋಪಕ್ಕೆ ಅಂಕಿಅಂಶ ಸಮೇತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ತರ ನೀಡಿದ್ದಾರೆ.
ಆಧಾರ ರಹಿತವಾದ ಆಪಾದನೆ ಮಾಡುವುದು ಅನಾವಶ್ಯಕ ಪ್ರಚಾರವನ್ನು ಗಿಟ್ಟಿಸುವ ತಂತ್ರವಷ್ಟೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ. 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ರಾಷ್ಟ್ರಾದ್ಯಂತ ಜಾರಿಗೆ ಬಂದಿತು. ಅದರಂತೆ 6-14 ವರ್ಷದ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸಲಾದ ಬಳಿಕ 2012-13ರಿಂದ ಯಾವುದೇ ಪಠ್ಯಕ್ರಮದ ಆಯ್ದ ಅನುದಾನರಹಿತ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳ ಕಲಿಕೆಯನ್ನೂ ಪೋಷಿಸುವ ನಿಲುವನ್ನು ಸಹ ಅಂದಿನ ಸರ್ಕಾರ ತೆಗೆದುಕೊಂಡಿತ್ತು.
ಅಂದಿನಿಂದ ಪ್ರಾರಂಭವಾದಂತೆ ಯಾವುದೇ ಒಂದು ಶೈಕ್ಷಣಿಕ ಸಾಲು ಪೂರ್ಣಗೊಂಡ ಮರುವರ್ಷದಲ್ಲಿ ಹಿಂದಿನ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯ ಆಧಾರದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್.ಟಿ.ಇ.ಶುಲ್ಕವನ್ನು ಮರುಪಾವತಿಸುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ.
ನನಗೆ ಒದಗಿಸಲಾದ ಅಂಕಿಅಂಶಗಳ ಆಧಾರದಲ್ಲಿ 2012-13 ರಿಂದ ಇಲ್ಲಿಯವರೆಗೆ ಸುಮಾರು 5.35 ಲಕ್ಷ ಮಕ್ಕಳಿಗೆ ಆರ್.ಟಿ.ಇ ಅಡಿಯಲ್ಲಿ ವಿವಿಧ ಖಾಸಗಿ ಅನುದಾನರಹಿತ ಶಾಲೆಗಳಿಗೆ ರಾಜ್ಯ ಸರ್ಕಾರವು ದಾಖಲಾತಿಯನ್ನು ಒದಗಿಸಿದ್ದು, ಅಷ್ಟು ಸಂಖ್ಯೆಯ ಮಕ್ಕಳ ಬೋಧನಾ ಶುಲ್ಕದ ಮರುಪಾವತಿಯಾಗಿ 2372.36 ಕೋಟಿ ರೂ.ಗಳನ್ನು ಸಂಬಂಧಿಸಿದ ಶಾಲೆಗಳಿಗೆ ಬಿಡುಗಡೆ ಮಾಡುವ ಕ್ರಮವನ್ನು ಅನುಸರಿಸಿದೆ.
2020-21ನೇ ಸಾಲಿನಲ್ಲಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಮ್ಮ ಸರ್ಕಾರ ತನ್ನ ಆಯವ್ಯಯದಲ್ಲಿ ರೂ.550 ಕೋಟಿಗಳನ್ನು ಆರ್.ಟಿ.ಇ.ಶುಲ್ಕ ಮರುಪಾವತಿಗೆ ಮೀಸಲಿಟ್ಟಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಪರಿಸ್ಥಿತಿಯನ್ನು ಅರಿತು, ನಮ್ಮ ಒತ್ತಾಸೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಖಾಸಗಿ ಶಾಲೆಗಳಿಗೆ ಅನವಶ್ಯಕ ಸಮಸ್ಯೆಯಾಗಬಾರದೆನ್ನುವ ಸದುದ್ದೇಶದಿಂದ ಮೊದಲ ಎರಡು ಕಂತುಗಳಾದ ರೂ.275 ಕೋಟಿ ರೂಗಳನ್ನು ದಿನಾಂಕ 5.6.2020 ರಲ್ಲಿ ಒಮ್ಮೆಗೇ ಬಿಡುಗಡೆ ಮಾಡಿದರು.
ಅಷ್ಟೇ ಅಲ್ಲದೇ, 28.9.2020 ರಂದು ಎರಡನೇ ಬಾರಿಗೆ ಮೂರನೇ ಕಂತು.ರೂ.137.5 ಕೋಟಿ ಹಾಗೂ ದಿನಾಂಕ.10.12.2020 ರಲ್ಲಿ ಮೂರನೇ ಬಾರಿಗೆ ನಾಲ್ಕನೇ ಹಾಗೂ ಕೊನೆಯ ಕಂತಾದ ರೂ.137.50 ಕೋಟಿ ಅಂದರೆ ಡಿಸೆಂಬರ್ 2020ರ ಮಾಸದ ಒಳಗೆ ಇಡೀ ವರ್ಷದ ಅನುದಾನವಾದ ರೂ.550 ಕೋಟಿ ಗಳನ್ನು ನಮ್ಮ ಸರ್ಕಾರ ಖಾಸಗಿ ಶಾಲೆಗಳ ಆರ್.ಟಿ.ಇ.ಶುಲ್ಕ ಮರುಪಾವತಿಗೆ ಬಿಡುಗಡೆ ಮಾಡಿದೆ ಅಂತ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಯಾವುದೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ನಿಗದಿಯಾದ ಆರ್.ಟಿ.ಇ ಶುಲ್ಕ ಮರುಪಾವತಿ ಅನುದಾನ ಇಷ್ಟು ಶೀಘ್ರವಾಗಿ ಬಿಡುಗಡೆಗೊಂಡಿರುವುದು ದಾಖಲೆ ಅಂತ ಮಾಹಿತಿ ನೀಡಿದ್ದಾರೆ.
ಓದಿ: ಖಾಸಗಿ ಶಾಲೆ ಸಂಘಟನೆಗಳ ಸಮಸ್ಯೆ.. ನ.27ರಂದು ಸಭೆ ನಡೆಸಲು ಸಚಿವರ ಸೂಚನೆ
ಸರ್ಕಾರದ ಆದೇಶಗಳಿಗೆ ಅನುಗುಣವಾಗಿ ಡಿ.11 ರಂದೇ ಇಲಾಖೆಯ ಆಯುಕ್ತರು ಈ ಸಾಲಿನ ಆರ್,ಟಿ.ಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಅಂತಿಮ ಸುತ್ತೋಲೆಯನ್ನು ಹೊರಡಿಸಿ, ನಿಗದಿಯಾದ ಸಂಪೂರ್ಣ ಅನುದಾನವನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿದ್ದಾರೆ. 2019-20ನೇ ಸಾಲಿನ ಆರ್.ಟಿ.ಇ.ಶುಲ್ಕ ಮರುಪಾವತಿಗೆ ಈ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅನುವಾಗುವಂತೆ ಹದಿನೈದು ದಿನಗಳ ಒಳಗೆ ಶಾಲೆಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ಅನುದಾನವನ್ನು ಉಪನಿರ್ದೇಶಕರು ಬಳಸದೆ ಉಳಿಸತಕ್ಕದ್ದೆಲ್ಲವೆಂದು ಸೂಚನೆ ಸಹ ನೀಡಿದ್ದಾರೆ.
ನನಗೆ ಲಭ್ಯವಿರುವ ಮಾಹಿತಿಯಂತೆ 2019-20ನೇ ಸಾಲಿಗೆ ಸಂಬಂಧಿಸಿದಂತೆ ಈ ಸಾಲಿನಲ್ಲಿ ಬಿಡುಗಡೆ ಮಾಡಲಾದ 550 ಕೋಟಿ ರೂ.ಗಳಿಗೆ ಅನುಸಾರವಾಗಿ ದಿನಾಂಕ.23.12.2020ರ ಮಾಹಿತಿಯಂತೆ 441.53 ಕೋಟಿ ರೂಗಳನ್ನು ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಅಂದರೆ ಸುಮಾರು ಶೇ.80 ರಷ್ಟು ಪ್ರಗತಿ ಈಗಾಗಲೇ ತೋರಿಸಲಾಗಿದೆ. ಯಾವುದೇ ಶೈಕ್ಷಣಿಕ ಸಾಲಿನಲ್ಲಿ, ಡಿಸೆಂಬರ್ ಮಾಸಾಂತ್ಯಕ್ಕೆ ಆರ್.ಟಿ.ಇ ಶುಲ್ಕ ಮರುಪಾವತಿ ಪ್ರಕ್ರಿಯೆಯಲ್ಲಿ ಇಲಾಖೆಯು ಇಷ್ಟು ಪ್ರಗತಿಯನ್ನು ಸಾಧಿಸಿದ್ದಿಲ್ಲ.
ಇನ್ನು ಆನ್ಲೈನ್ ತಂತ್ರಾಂಶದ ಮೂಲಕ ಶುಲ್ಕ ಮರುಪಾವತಿಯನ್ನು ಸರ್ಕಾರವು ಪ್ರಾರಂಭಿಸಿದ ಪ್ರಮುಖ ಉದ್ದೇಶ, ಮಧ್ಯವರ್ತಿಗಳ ಉಪಟಳವನ್ನು ತಡೆಯಬೇಕು, ಯಾವುದೇ ಶಾಲೆಯ ಆಡಳಿತ ಮಂಡಳಿಯು ವ್ಯವಸ್ಥೆಯ ಲೋಪದೋಷಗಳಿಂದ ಅನಗತ್ಯ ಶೋಷಣೆಗೆ ಒಳಗಾಗಬಾರದೆಂಬುದಾಗಿತ್ತು. ತಂತ್ರಾಂಶ ಬಳಕೆಯೆನ್ನುವುದು ಪಾರದರ್ಶಕತೆಗೆ ಒತ್ತುಕೊಟ್ಟಿದ್ದಷ್ಟೇ ಅಲ್ಲ, ವಿದ್ಯಾರ್ಥಿಯ ದಾಖಲಾತಿಗೆ ಅನುಗುಣವಾದ ಶುಲ್ಕದ ಸರಳ ಮರುಪಾವತಿಗೆ ನಾಂದಿ ಹಾಡಿತು. ಇನ್ನು ಯಾವುದೇ ಶಾಲೆ ಅಪೇಕ್ಷಿತ ದಾಖಲೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸದೇ ಇದ್ದಲ್ಲಿ, ತಂತ್ರಾಂಶವು ಅದನ್ನು ಅನುಮೋದಿಸದೇ ಇರುವುದು ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ತಂತ್ರಾಂಶದ ಬಳಕೆಯನ್ನು ಸೀಮಿತಗೊಳಿಸಿದಲ್ಲಿ ಅದು ಇಲ್ಲಸಲ್ಲದ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.
ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2016-17 ನೇ ಸಾಲಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು 12 ಶಾಲೆಗಳು ನಿಗದಿತ ದಾಖಲೆಗಳನ್ನು ಸಲ್ಲಿಸಿಲ್ಲದ ಕಾರಣ ಆರ್.ಟಿ.ಇ ಶುಲ್ಕ ಮರುಪಾವತಿಯನ್ನು ಇಲ್ಲಿಯವರೆಗೆ ಪಡೆದಿಲ್ಲ. 2017-18ಕ್ಕೆ ಸಂಬಂಧಿಸಿದಂತೆ 29 ಶಾಲೆಗಳು, 2018-19ನೇಸಾಲಿಗೆ ಸಂಬಂಧಿಸಿದಂತೆ 71 ಶಾಲೆಗಳು, 2019-20 ನೇ ಸಾಲಿಗೆ ಸಂಬಂಧಿಸಿದಂತೆ 1039 ಶಾಲೆಗಳು ವಿವಿಧ ನಿರೀಕ್ಷಿತ ದಾಖಲೆಗಳನ್ನು ಸಲ್ಲಿಸದ ಕಾರಣ ಇನ್ನೂ ಆರ್.ಟಿ.ಇ.ಶುಲ್ಕ ಮರುಪಾವತಿಯನ್ನು ಇಂದಿಗೂ ಪಡೆದಿಲ್ಲ.
ಈ ಎಲ್ಲ ಶಾಲೆಗಳೂ ನಿರೀಕ್ಷಿತ ದಾಖಲೆಗಳನ್ನು ತಂತ್ರಾಂಶದ ಮೂಲಕ ಸಲ್ಲಿಸಿದ ಬಳಿಕವೂ ಹಣ ಪಾವತಿ ವಿಳಂಬವಾದ ಪ್ರಕರಣಗಳೇನಾದರೂ ಇದ್ದರೆ, ಗಮನಕ್ಕೆ ತಂದಲ್ಲಿ ಅಂತಹ ಶಾಲೆಗಳಿಗೆ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡುತ್ತೆ. ಹಾಗೇ ಈ ಲೋಪಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗುತ್ತೇನೆ ಅಂತ ಸ್ಪಷ್ಟಪಡಿಸಿದ್ದಾರೆ. ದಾಖಲೆಗಳನ್ನು ಸಲ್ಲಿಸದೆಯೂ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸುವವರಿಗೆ ನನ್ನ ಬಳಿ ಉತ್ತರವಿಲ್ಲ ಅಂತಲೂ ತಿಳಿಸಿದ್ದಾರೆ.
ಬಹಳ ಪ್ರಮುಖವಾಗಿ, ಆರ್.ಟಿ.ಇ.ಶುಲ್ಕ ಮರುಪಾವತಿಯೆನ್ನುವುದು ಸರ್ಕಾರವು ಯಾವುದೇ ವಿದ್ಯಾರ್ಥಿಯ ಕಲಿಕೆಗೆ ತೊಡಕಾಗಬಾರದೆನ್ನುವ ಸದುದ್ದೇಶದಿಂದ ತನ್ನ ಸೀಮಿತ ಸಂಪನ್ಮೂಲಗಳ ನಡುವೆಯೂ ನಿರ್ವಹಿಸುತ್ತಿರುವ ಪ್ರಧಾನ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಪೋಷಿಸಬೇಕೆನ್ನುವ ಪ್ರಮುಖ ಜವಾಬ್ದಾರಿಯನ್ನು ಹೊಂದಿಯೂ ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದೆನ್ನುವ ಸದಾಶಯವನ್ನು ಸರ್ಕಾರ ಈ ಶುಲ್ಕ ಮರುಪಾವತಿ ಮಾಡುತ್ತಿದೆ.
ಇನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರು, ಶಿಕ್ಷಕೇತರರಿಗೆ ಯಾವುದೇ ಪ್ರತಿಕೂಲ ಸಂದರ್ಭದಲ್ಲಿಯೂ ಉದ್ಯೋಗ ಭದ್ರತೆಯನ್ನು ನೀಡಬೇಕಾಗಿದೆ. ಅದು ಅವುಗಳ ಪ್ರಾಥಮಿಕ ಜವಾಬ್ದಾರಿಯೂ ಹೌದು. ಆದರೂ ಖಾಸಗಿ ಶಾಲೆಗಳು ನಮ್ಮ ಮಕ್ಕಳಿಗೆ ವಿದ್ಯಾದಾನವನ್ನು ಮಾಡುವ ಶ್ರೇಷ್ಠ ಸಂಸ್ಥೆಗಳೆಂದೇ ಭಾವಿಸಿ ಸರ್ಕಾರವು ಹಲವು ಸುಧಾರಣೆಗಳಿಗೆ ಮುಂದಾಗಿದೆ. ನಿಯಮಗಳ ವ್ಯಾಪ್ತಿಯಲ್ಲಿ ಪಡೆಯಬೇಕಾದ ಎಲ್ಲ ಸವಲತ್ತುಗಳನ್ನು ಸರ್ಕಾರವು ಗಮನಿಸಿಯೇ ಹಲವು ರಿಯಾಯಿತಿಗಳಿಗೆ ಮುಂದಾಗಿದೆ. ಯಾವ ಆಗ್ರಹಗಳನ್ನು ನಿಯಮಗಳ ಆಧಾರದಲ್ಲಿ ಪರಿಗಣಿಸಬಹುದೋ ಅಂತಹವುಗಳನ್ನು ಸರ್ಕಾರವು ಸಹಾನುಭೂತಿಯಿಂದಲೇ ಗಮನಿಸಿದೆ.
ಅದನ್ನು ಬಿಟ್ಟು, 'ಆರ್.ಟಿ.ಇ.ಶುಲ್ಕ ಮರುಪಾವತಿಯಾಗಿದೆ ಎನ್ನುವ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು' ಎಂದು ಆಧಾರರಹಿತವಾದ ಆಪಾದನೆ ಮಾಡುವುದು ಅನವಶ್ಯಕ ಪ್ರಚಾರವನ್ನು, ಗಿಟ್ಟಿಸುವ ತಂತ್ರವಷ್ಟೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ. ಆರೋಪಗಳನ್ನು ಮಾಡಿದವರೂ ಸಹ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ, ಸರ್ಕಾರದ ನಿಯಂತ್ರಣದ ಇತಿಮಿತಿಗಳ ಬಗ್ಗೆಯೂ ಚರ್ಚಿಸಲಿ. ನಮಗೆ ಬೇಕಿರುವುದು ಸಹನಶೀಲವಾದ ಸಮಾಜ, ನಮ್ಮ ಮಕ್ಕಳ ಭವ್ಯ ಭವಿಷ್ಯ. ಅದರಾಚೆಗೆ ಎಲ್ಲವೂ ಅರ್ಥಹೀನ ಅಂತ ಹೇಳಿದ್ದಾರೆ.