ಬೆಂಗಳೂರು : ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಅತೀ ಹೆಚ್ಚು ಹಾನಿಗೊಳಗಾಗಿರುವುದು ಶಿಕ್ಷಣ ಕ್ಷೇತ್ರ. ಭವಿಷ್ಯದ ಕನಸು ಕಾಣುತ್ತಿರುವ ಪ್ರತಿ ಮಗುವಿನ ಕಲಿಕೆಗೂ ಕೊರೊನಾ ಅಡ್ಡಗಾಲು ಹಾಕಿದೆ. ಇವೆಲ್ಲದರ ನಡುವೆಯೂ ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಪರೀಕ್ಷೆ ಅನಿರ್ವಾಯ ಎನಿಸಿದಾಗ ದಿಟ್ಟ ಹೆಜ್ಜೆ ಇಟ್ಟು ಆಗಿನ ಸಚಿವರಾಗಿದ್ದ ಸುರೇಶ್ ಕುಮಾರ್ ಪರೀಕ್ಷೆ ನಡೆಸಿದರು.
ಇದೀಗ, ನಿನ್ನೆಯಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಶೇ.99.99 ಮಕ್ಕಳು ತೇಗರ್ಡೆಯಾಗಿದ್ದಾರೆ. ಕೊರೊನಾ ಆತಂಕದ ಕಾರಣಕ್ಕೆ ಪರೀಕ್ಷೆ ಬರೆದಿರುವ ಯಾವ ವಿದ್ಯಾರ್ಥಿಯನ್ನೂ ಫೇಲ್ ಮಾಡಿಲ್ಲ. ಬದಲಿಗೆ ಕಡಿಮೆ ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಎಲ್ಲರನ್ನೂ ಪಾಸ್ ಮಾಡಲಾಗಿದೆ.
2020-21ನೇ ಸಾಲಿನಲ್ಲಿ 8,71,443 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಇದೀಗ ಅವರಿಗೆಲ್ಲ ಮುಂದಿನ ಶಿಕ್ಷಣಕ್ಕೆ ಪ್ರವೇಶ ಸಿಗಲಿದ್ಯಾ? ಮುಂದಿನ ಪದವಿ ಪೂರ್ವ ಕಾಲೇಜಿಗೆ ಸೇರಲು ಸೀಟುಗಳು ಲಭ್ಯವಿದ್ಯಾ? ಅನ್ನೋ ಅನುಮಾನ ಕಾಡುತ್ತೆ. ಆದರೆ, ಇಲ್ಲಿ ಎಲ್ಲರೂ ಪಾಸ್ ಆಗಿದ್ದು, ಮುಂದಿನ ಶಿಕ್ಷಣಕ್ಕೆ ಸೀಟು ಸಿಕ್ಕರೂ, ಪಾಠ ಮಾಡೋಕ್ಕೆ ಯಾರೂ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗುತ್ತೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬಿ ಸಿ ನಾಗೇಶ್, ಕಾಲೇಜಿನಲ್ಲಿ ಸೀಟು ಕೊರತೆ ಉಂಟಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಇಂತಹದ್ದೇ ಕಾಲೇಜು ಬೇಕು, ಸೇರಬೇಕು ಎಂದಾಗ ಆ ಕಾಲೇಜಿನಲ್ಲಿ ಸೀಟು ಕೊರತೆ ಸೃಷ್ಟಿಯಾಗಬಹುದು. ಅದನ್ನ ಮುಂದಿನ ದಿನಗಳಲ್ಲಿ ಪರಿಹರಿಸಲಾಗುವುದು ಅಂದರು.
ಸದ್ಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಕಾಲೇಜುಗಳು 5,600ಕ್ಕೂ ಹೆಚ್ಚಿವೆ. ಇದರಲ್ಲಿ ವಿವಿಧ ಕೋರ್ಸ್ಗಳ 12 ಲಕ್ಷ ಸೀಟುಗಳು ಲಭ್ಯವಿದೆ. ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಇದೀಗ ಪಾಸ್ ಆಗಿರುವ 8 ಲಕ್ಷ ವಿದ್ಯಾರ್ಥಿಗಳಿಗೆ ಇಲಾಖೆ ವ್ಯಾಪ್ತಿಯಲ್ಲಿ 12 ಲಕ್ಷಕ್ಕೂ ಹೆಚ್ಚು ಸೀಟು ಲಭ್ಯವಿದೆ.
ನಮಗೆ ತಲೆದೂರಿರುವ ದೊಡ್ಡ ಸಮಸ್ಯೆ ಅಂದರೆ ಪಾಠ ಮಾಡುವ ಉಪನ್ಯಾಸಕರ ಕೊರತೆ. ಇದಕ್ಕಾಗಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುವುದು. ಸರ್ಕಾರದ ಮಟ್ಟದಲ್ಲಿ ಹೈಸ್ಕೂಲ್‌ಗಳನ್ನ ಮೇಲ್ದರ್ಜೆಗೆ ಏರಿಸಿ ಕಾಲೇಜು ಆರಂಭಕ್ಕೂ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆಯೇ ಪಿಯುಸಿ ಸೀಟು ಅಲಭ್ಯವಾದರೆ, ಡಿಮ್ಯಾಂಡು ಹೆಚ್ಚಾದರೆ ಅಂತಹ ಕಾಲೇಜುಗಳ ಹೊಸ ಸೆಷನ್ ಶುರು ಮಾಡಬಹುದು ಎಂದು ತಿಳಿಸಲಾಗಿತ್ತು. ಕಾಲೇಜು-ತರಗತಿ ಆರಂಭಕ್ಕೆ ಇಲಾಖೆಯ ಅನುಮತಿಯೂ ಇರುವುದಾಗಿ ತಿಳಿಸಿತ್ತು. ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಅರ್ಜಿಯನ್ನೂ ಆಹ್ವಾನಿಸಿದೆ. ಪಿಯುಸಿ ಸೇರಲು ಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಪಿಯು ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ.