ಬೆಂಗಳೂರು: ರಾಜ್ಯದಲ್ಲಿರುವ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ. ಇದನ್ನು ಉಳಿಸಿಕೊಳ್ಳಲು ಅನಿವಾರ್ಯವಾದರೆ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚಾಯಿತಿಗೆ ಒಂದರಂತೆ ರಾಜ್ಯದ 709 ಗ್ರಾಮ ಪಂಚಾಯಿತಿಗಳಲ್ಲಿ ಮಾದರಿ ಶಾಲೆ ತೆರೆಯಲಾಗುವುದು. ಅಗತ್ಯವಿದ್ದರೆ ಕಡಿಮೆ ಮಕ್ಕಳಿರುವ ಇತರೆ ಪ್ರಾಥಮಿಕ ಶಾಲೆಗಳನ್ನು ಮಾದರಿ ಶಾಲೆಗಳಲ್ಲಿ ವಿಲೀನಗೊಳಿಸಲಾಗುವುದು. ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿವೆ. ಅದರಲ್ಲಿ 13 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 25 ಮಕ್ಕಳಿಗಿಂತ ಕಡಿಮೆ ಮಕ್ಕಳಿದ್ದಾರೆ. ಹೀಗಾಗಿ ಶಾಲೆ ಮುಚ್ಚದೇ ಅವುಗಳನ್ನು ಮಾದರಿ ಶಾಲೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಈ ವರ್ಷ 15 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ: ಕಳೆದ ಕೆಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮುಂದಿನ ಎರಡು ಮೂರು ತಿಂಗಳಲ್ಲಿ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತದೆ. ಅನೇಕ ಗ್ರಾಮೀಣ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಈ ಕೊರತೆಯನ್ನು ನಿವಾರಿಸುತ್ತೇವೆ ಎಂದು ಸಚಿವರು ಹೇಳಿದರು.
35 ಸಾವಿರ ಅತಿಥಿ ಶಿಕ್ಷಕರ ನೇಮಕ.. ರಾಜ್ಯದ ಶಾಲೆಗಳಲ್ಲಿ ಶಿಕ್ಷಕ, ವಿದ್ಯಾರ್ಥಿಗಳ ಅನುಪಾತ 1:23 ಇದೆ. ನಗರ ಹಾಗೂ ನಗರದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಹಲವು ಜಿಲ್ಲೆಗಳ ಗ್ರಾಮೀಣ ಶಾಲೆಗಳಲ್ಲಿ ಸಮಸ್ಯೆ ಹೆಚ್ಚಿದೆ. 10 ಮಕ್ಕಳ ಒಳಗಿರುವ 1,812 ಶಾಲೆಗಳಿಗೂ ತಲಾ ಒಬ್ಬರು ಶಿಕ್ಷಕರನ್ನು ನೀಡಿದ್ದು, 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 13 ಸಾವಿರ ಶಾಲೆಗಳಿಗೂ ಸೌಲಭ್ಯ ಒದಗಿಸಲಾಗಿದೆ. 35,000 ಮಂದಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಅಲ್ಲದೆ ಇವರಿಗೆ ಈಗ ನೀಡುತ್ತಿರುವ ಗೌರವಧನವನ್ನು ಸಹ ಹೆಚ್ಚಿಸಲು ನಿರ್ಧರಿಸಲಾಗಿದೆ. ಶಿಕ್ಷಕರ ನೇಮಕದ ಜೊತೆಗೆ ಶಾಲಾ ಕೊಠಡಿಗಳ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರವೇ 7,000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ. ಮಕ್ಕಳಿಗೆ ಎರಡು ಜತೆ ಸಮವಸ್ತ್ರ ಶೀಘ್ರ ವಿತರಿಸಲಾಗುವುದು. ಶೂ ಖರೀದಿಗೆ ನಿಗದಿಪಡಿಸಿದ ಹಣ ಕಡಿಮೆಯಾಗಿಲ್ಲ. ಅದೇ ದರಕ್ಕೆ ಉತ್ತಮ ಗುಣಮಟ್ಟದ ಶೂ, ಚಪ್ಪಲಿ, ಸಾಕ್ಸ್ ನೀಡಲು ಹಲವು ಕಂಪನಿಗಳು ಮುಂದೆ ಬಂದಿವೆ ಎಂದು ಶಿಕ್ಷಣ ಸಚಿವರು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರು ಬದಲಾವಣೆ.. ಕೊರೊನಾ ಸಮಯದಲ್ಲಿ ಆದ ಶೈಕ್ಷಣಿಕ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಜಾರಿ ಮಾಡಿದ್ದೇವೆ. ಸರ್ಕಾರಿ ಶಾಲೆಗಳಲ್ಲೇ ಸ್ಪೋಕನ್ ಇಂಗ್ಲಿಷ್ ಪ್ರಾರಂಭ ಮಾಡಲಾಗ್ತಿದೆ. ಶಾಸಕರ ನಿಧಿಯಿಂದ ಸರ್ಕಾರಿ ಶಾಲೆಗಳಿಗೆ ವಾಹನ ಖರೀದಿಗೆ ಆದೇಶ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರನ್ನು`ಶಾಲಾ ಶಿಕ್ಷಣ ಇಲಾಖೆ’ ಅಂತ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಶಾಲೆಗಳ ಆಸ್ತಿ ರಕ್ಷಣೆಗೆ ಕ್ರಮ.. ಶಾಲೆಗಳ ಆಸ್ತಿ ರಕ್ಷಣೆಗೆ 3 ತಿಂಗಳು ಆಸ್ತಿ ರಕ್ಷಣೆ ಅಭಿಯಾನ ಪ್ರಾರಂಭಿಸಲಾಗುವುದು. ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ನೀಡಲು ತೀರ್ಮಾನ ಕೈಗೊಂಡಿದ್ದೇವೆ.
ಶೂ, ಸಾಕ್ಸ್ ಖರೀದಿ ಹೊಣೆ ಎಸ್ಎಂಸಿಗಳಿಗೆ.. ಶೂ ಮತ್ತು ಸಾಕ್ಸ್ ಖರೀದಿಗೆ ಹಣ ಬಿಡುಗಡೆ ಮಾಡಲು ಎಸ್‌ಡಿಎಂ ಗಳಿಗೆ ಶೂ, ಸಾಕ್ಸ್ ಖರೀದಿಗೆ ಅಧಿಕಾರ ನೀಡಲಾಗಿದೆ. ಸಮವಸ್ತ್ರಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನೊಂದು ತಿಂಗಳಲ್ಲಿ ಎರಡು ಜೊತೆ ಸಮವಸ್ತ್ರ ಮಕ್ಕಳಿಗೆ ಸಿಗಲಿದೆ ಎಂದು ಸಚಿವರು ವಿವರಿಸಿದರು.
ನನ್ನ ಶಾಲೆ ನನ್ನ ಕೊಡುಗೆ ಆ್ಯಪ್ ಮೂಲಕ ದಾನಿಗಳ ಸಹಾಯದಿಂದ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಈಗಾಗಲೇ ಶೇ.97 ಪಠ್ಯ ಮಕ್ಕಳಿಗೆ ತಲುಪಿದೆ. ತಪ್ಪಾಗಿರುವ ಪಠ್ಯ ತಿದ್ದುಪಡಿಗೆ ಆದೇಶ ನೀಡಲಾಗಿದೆ. ವರ್ಗಾವಣೆ ನೀತಿ ಸರಳ ಮಾಡಿ ಪ್ರಕ್ರಿಯೆ ಮುಕ್ತಾಯ ಮಾಡಿದ್ದೇವೆ ಅಂತ ಸಚಿವ ಬಿ ಸಿ ನಾಗೇಶ್ ಮಾಹಿತಿ ನೀಡಿದರು.