ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡ ಅತಿಥಿ ಶಿಕ್ಷಕರನ್ನು ಜಿಲ್ಲೆಯೊಳಗೆ ಮರು ಹೊಂದಾಣಿಕೆ ಮಾಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಷರತ್ತುಗಳನ್ನೊಳಗೊಂಡ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ಅನುಮತಿ ನೀಡಿತ್ತು. 18,000 ಹಾಗು 5078 ಹುದ್ದೆಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಿ ಸೂಚನೆ ನೀಡಿತ್ತು. ಸದ್ಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಖಾಲಿ ಹುದ್ದೆಗೆ ವರ್ಗಾವಣೆಗೊಂಡು ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಅತಿಥಿ ಶಿಕ್ಷಕರನ್ನು ಸಂಬಂಧಪಟ್ಟ ಶಾಲೆಯಿಂದ ಬಿಡುಗಡೆ ಮಾಡುವಂತೆ ಸೂಚಿಸಲಾಗಿತ್ತು.
ನಂತರ ತಾಲೂಕಿನ ಒಳಗೆ ಅಗತ್ಯ ಖಾಲಿ ಹುದ್ದೆ ಇರುವ ಶಾಲೆಯಲ್ಲಿ ಮರು ಹಂಚಿಕೆ ಮಾಡಿ ಮುಂದುವರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಕೆಲ ತಾಲೂಕುಗಳಲ್ಲಿ ಖಾಲಿ ಹುದ್ದೆಗಳಿಗೆ ವರ್ಗಾವಣೆ ಪಡೆದು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದು, ಆ ಹುದ್ದೆಗಳು ಭರ್ತಿಯಾಗಿದೆ. ಅದೇ ಜಿಲ್ಲೆಯಲ್ಲಿನ ಬೇರೆ ತಾಲೂಕಿನಲ್ಲಿ ವರ್ಗಾವಣೆಯಿಂದ ಹೊರ ಹೋಗಿದ್ದರಿಂದ ಹೆಚ್ಚು ಹುದ್ದೆಗಳು ತೆರವಾಗಿತ್ತು. ವರ್ಗಾವಣೆಯಿಂದ ಅತಿ ಹೆಚ್ಚು ಖಾಲಿ ಹುದ್ದೆಗಳು ಉದ್ಭವವಾಗಿರುವ ತಾಲೂಕುಗಳಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ತೊಂದರೆಯಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಈ ನಿಟ್ಟಿನಲ್ಲಿ, ಜಿಲ್ಲೆಗೆ ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಹುದ್ದೆಗಳ ಸಂಖ್ಯೆಯ ಮಿತಿಯೊಳಗೆ ಅಗತ್ಯತೆ ಆಧರಿಸಿ ಜಿಲ್ಲೆಯೊಳಗೆ ಅತಿಥಿ ಶಿಕ್ಷಕರ ಅಗತ್ಯತೆ ಇಲ್ಲದಿರುವ ತಾಲೂಕಿನಿಂದ, ಅಗತ್ಯತೆ ಇರುವ ತಾಲೂಕಿಗೆ ಮರು ಹೊಂದಾಣಿಕೆ ಮಾಡುಲು ಜಿಲ್ಲಾ ಉಪನಿರ್ದೇಶಕರಿಗೆ ಅನುಮತಿ ನೀಡಲಾಗಿದೆ. ಅದರಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಕ್ಷಣವೇ ಮರುಹೊಂದಾಣಿಕೆ ಮಾಡಿ ಅತಿಥಿ ಶಿಕ್ಷಕರ ಸೇವೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ದಾವಣಗೆರೆ: ಶಿಕ್ಷಕನ ತಲೆಗೆ ಬಕೆಟ್ ತೊಡಿಸಿ ವಿಕೃತ ಮನಸ್ಸಿನ ವಿದ್ಯಾರ್ಥಿಗಳ ಪುಂಡಾಟ