ಬೆಂಗಳೂರು: ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಾದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತೀಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಇಡಿ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ತನ್ನ ಭಾರತೀಯ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿರುವ ಕ್ರಮ ಹಾಗೂ ಸಂಸ್ಥೆಯ ಖಾತೆ ವಿವರಗಳನ್ನು ಇಡಿಯೊಂದಿಗೆ ಹಂಚಿಕೊಂಡ 5 ಖಾಸಗಿ ಬ್ಯಾಂಕ್ಗಳ ನಡೆಯು ಕಾನೂನುಬಾಹಿರ ಎಂದು ಆರೋಪಿಸಿ ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಟ್ರಸ್ಟ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿಸಿದೆ. ತೀರ್ಪು ಕಾಯ್ದಿರಿಸುವ ಸಂದರ್ಭದಲ್ಲಿಯೇ ಇಡಿಗೆ ಪ್ರಶ್ನಿಸಿರುವ ಪೀಠ, ಅಮ್ನೆಸ್ಟಿ ತನ್ನ ಸಿಬ್ಬಂದಿಗೆ ವೇತನ ಹಾಗೂ ತೆರಿಗೆ ಪಾವತಿಸಲು 40 ಲಕ್ಷ ರೂಪಾಯಿಗಳವರೆಗೆ ಹಣಕಾಸು ಚಟುವಟಿಕೆ ನಡೆಸಲು ಅನುಮತಿ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗೆ ಅಮ್ನೆಸ್ಟಿ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಸ್ಥಗಿತಗೊಳಿಸುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಿದ್ದಾರೆ. ಸೂಕ್ತ ಪ್ರಾಧಿಕಾರದ ಮುಂದೆಯೂ ಮಂಡಿಸಿಲ್ಲ. ಇಡಿಯ ಈ ನಡೆ ಪಿಎಂಎಲ್ಎ ಹಾಗೂ ಎಫ್ಸಿಆರ್ಎ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.
ಓದಿ: ಮುಷ್ಕರದಿಂದ ಉಂಟಾದ ಸಮಸ್ಯೆ.. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿಎಸ್ವೈ ಕಿಡಿ!!
ಇದಕ್ಕೆ ಪ್ರತಿವಾದ ಮಂಡಿಸಿದ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗಂದ ಅವರು, ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಗೂ ಮೇಲ್ಮನವಿ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಬೇಕಿತ್ತು. ನೇರವಾಗಿ ಹೈಕೋರ್ಟ್ ಮುಂದೆ ದಾಖಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಿಲ್ಲ ಎಂದು ವಾದಿಸಿದರು.
ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘಿಸಿ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪದಡಿ 2019ರ ಅಕ್ಟೋಬರ್ 25ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಮ್ನೆಸ್ಟಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿ ರೂ. ಅನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ. ಸಂಸ್ಥೆ ಪಿಎಂಎಲ್ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿತ್ತು.