ಬೆಂಗಳೂರು: ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ (ಎಫ್‌ಆರ್‌ಬಿಎಂ) 2021ರ ಅನ್ವಯ ಆದಾಯ ಮತ್ತು ವೆಚ್ಚ ಸರಿದೂಗಿಸುವ ನಿಟ್ಟಿನಲ್ಲಿ 9 ಸಾವಿರ ಕೋಟಿ ರೂ ಮೀರದಂತೆ 2022-23ನೇ ಸಾಲಿನ ಬಜೆಟ್ ಮಂಡನೆಗೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಆರ್ಥಿಕ ಶಿಸ್ತು ತರಲು ನಿರ್ಧರಿಸಿದ್ದಾಗಿ ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ಆರ್ಥಿಕ ಸಾಲಿನಲ್ಲಿ 9,500 ಕೋಟಿ ರೂ. ಮೀರಿದ ಆಯವ್ಯಯ ಮಂಡನೆ ಮಾಡಲಾಗಿತ್ತು. ಆದರೆ, ಈ ವರ್ಷ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿಯಾಗಿದ್ದರಿಂದ ಆದಾಯದ ಮೂಲ ಇಲ್ಲದಿದ್ದರೂ ಕೊರತೆ ಇಟ್ಟುಕೊಂಡು ಬಜೆಟ್ ಮಂಡಿಸುವ ಮೂಲಕ ವೆಚ್ಚ ತೋರಿಸುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಾಗೂ ಪಾಲಿಕೆಗೆ ಎಲ್ಲ ಮೂಲಗಳಿಂದ ಬರುವ ಆದಾಯವನ್ನು ಪರಿಗಣಿಸಿದರೂ 10 ಸಾವಿರ ಕೋಟಿ ರೂ ಆದಾಯ ಮೂಲ ತೋರಿಸಲಾಗುತ್ತಿಲ್ಲ. ಹೀಗಾಗಿ, ಈ ವರ್ಷ 9 ಸಾವಿರ ಕೋಟಿ ರೂ ಮೀರದಂತೆ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜನಪ್ರತಿನಿಧಿಗಳಿಲ್ಲದೆ ಸತತ ಎರಡನೇ ವರ್ಷವೂ ಪಾಲಿಕೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಮಂಡಿಸಲಾಗುತ್ತಿದೆ. ಮಾಸಾಂತ್ಯದಲ್ಲಿ ಆಯವ್ಯಯ ಮಂಡನೆ ಆಗಲಿದೆ. ಎರಡು ತಿಂಗಳಿಂದ ಪಾಲಿಕೆಯ 23 ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿ ಆದಾಯ ಕ್ರೋಢೀಕರಣ ಮತ್ತು ವೆಚ್ಚದ ಬಗ್ಗೆ ಲೆಕ್ಕಾಚಾರ ಮಾಡಿ ಈ ಮೊದಲು ಕರಡು ಪ್ರತಿ ಸಿದ್ಧಪಡಿಸಲಾಗಿತ್ತು. ಆದರೆ, ಪಾಲಿಕೆಯಲ್ಲಿ ಕಡ್ಡಾಯವಾಗಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಇತ್ತೀಚೆಗೆ ಸರ್ಕಾರ ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ 2021 ಅನ್ನು ಜಾರಿಗೊಳಿಸಿದೆ. ಈ ಕಾಯ್ದೆಯ ನಿಯಮಗಳನ್ನು 2022- 23ನೇ ಸಾಲಿನ ಬಜೆಟ್‌ನಲ್ಲಿಯೇ ಅಳವಡಿಕೆ ಮಾಡಿಕೊಳ್ಳುವಂತೆ ಸೂಚಿಸಿರುವುದರಿಂದ ಈವರೆಗೆ ಸಿದ್ಧಪಡಿಸಿದ್ದ ಕರಡು ಪ್ರತಿಯಲ್ಲಿ ವೆಚ್ಚ ತಗ್ಗಿಸುವುದು ಸೇರಿ ಕೆಲವು ಬದಲಾವಣೆ ಮಾಡಲು ಪಾಲಿಕೆ ಮುಂದಾಗಿದೆ ಎಂದಿದ್ದಾರೆ.
ಆದಾಯ ಮೂಲಗಳು ಯಾವುವು?: ಪಾಲಿಕೆ ಆಸ್ತಿ ತೆರಿಗೆಯಿಂದ 4 ಸಾವಿರ ಕೋಟಿ ರೂ., ಕಟ್ಟಡ ಪರವಾನಗಿ, ಉದ್ಯಮ ಪರವಾನಗಿ, ಕಟ್ಟಡಗಳ ಬಾಡಿಗೆ ಮುಂತಾದ ಆದಾಯ ಮೂಲಗಳಿಂದ 1,200 ಕೋಟಿ ರೂ ತೆರಿಗೆಯೇತರ ಆದಾಯ ಸಂಗ್ರಹಣೆಯ ಗುರಿ ಹೊಂದಲಾಗಿತ್ತು. ಆದರೆ, ಈ ವರ್ಷ ತೆರಿಗೆಯೇತರ ಆದಾಯವನ್ನು 1,600 ಕೋಟಿ ರೂ.ಗೆ ಹೆಚ್ಚಳ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಪಾಲಿಕೆ ಬಜೆಟ್ ಕುರಿತು ಮಾಹಿತಿ ನೀಡಿದ್ದಾರೆ.